ನವದೆಹಲಿ: ಕಳೆದ ವರ್ಷ ಅಕ್ಟೋಬರ್ 29ರಂದು ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಸಂಭವಿಸಿದ ರೈಲು ದುರಂತಕ್ಕೆ (Andhra Train Accident) ಚಾಲಕ ಮತ್ತು ಸಹಾಯಕ ಮೊಬೈಲ್ ಫೋನ್‌ನಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದುದೇ ಕಾರಣ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಶನಿವಾರ (ಮಾರ್ಚ್ 2) ತಿಳಿಸಿದರು. ಅಂದು ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆದು ಸುಮಾರು 14 ಮಂದಿ ಮೃತಪಟ್ಟಿದ್ದರು. ಎರಡು ರೈಲಿನ ಪೈಕಿ ಒಂದರ ಚಾಲಕ ಮತ್ತು ಸಹಾಯಕ ಚಾಲಕ ಮೊಬೈಲ್ ಫೋನ್‌ನಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದರಿಂದ ಸಿಗ್ನಲ್ ಗಮನಿಸಿರಲಿಲ್ಲ. ಇದರಿಂದ ಈ ದುರಂತ ಸಂಭವಿಸಿದೆ ಎಂದು ಸಚಿವರು ವಿವರಿಸಿದರು.
ಅಂದು ಸಂಜೆ 7 ಗಂಟೆ ಸುಮಾರಿಗೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕಂಟಕಪಲ್ಲಿಯ ಹೌರಾ-ಚೆನ್ನೈ ಮಾರ್ಗದಲ್ಲಿ ವಿಶಾಖಪಟ್ಟಣಂ-ಪಲಸಾ ವಿಶೇಷ ಪ್ಯಾಸೆಂಜರ್ ರೈಲು ತಾಂತ್ರಿಕ ದೋಷದಿಂದಾಗಿ ಸಿಗ್ನಲ್‌ಗೆ ಕಾಯುತ್ತಿದ್ದಾಗ ವಿಶಾಖಪಟ್ಟಣಂ-ರಾಯಗಢ ಪ್ಯಾಸೆಂಜರ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಪರಿಣಾಮ ಮೂರು ಬೋಗಿಗಳು ಹಳಿ ತಪ್ಪಿ 14 ಮಂದಿ ಮೃತಪಟ್ಟು 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು.
ಭಾರತೀಯ ರೈಲ್ವೆ ಅಳವಡಿಸಿಕೊಳ್ಳುತ್ತಿರುವ ಹೊಸ ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡುವ ವೇಳೆ ಅಶ್ವಿನಿ ವೈಷ್ಣವ್ ಆಂಧ್ರ ರೈಲು ಅಪಘಾತವನ್ನು ಉಲ್ಲೇಖಿಸಿದರು. “ಆಂಧ್ರಪ್ರದೇಶದಲ್ಲಿ ಅಕ್ಟೋಬರ್ 29ರಂದು ನಡೆದ ರೈಲು ಅಪಘಾತಕ್ಕೆ ಚಾಲಕ ಮತ್ತು ಸಹಾಕನ ನಿರ್ಲಕ್ಷ್ಯವೇ ಕಾರಣ. ಅಂದು ಅವರು ಮೊಬೈಲ್‌ನಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದರು. ಈಗ ನಾವು ಅಂತಹ ಪರಿಸ್ಥಿತಿಯಿಂದ ಹೇಗೆ ಪಾರಾಗಬಹುದು ಎನ್ನುವುದರ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಪೈಲಟ್ ಮತ್ತು ಸಹಾಯಕ ಪೈಲಟ್ ವಿಚಲಿತರಾಗದೆ ರೈಲನ್ನು ಓಡಿಸುವತ್ತ ಸಂಪೂರ್ಣ ಗಮನ ಹರಿಸಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದೇವೆʼʼ ಎಂದು ತಿಳಿಸಿದರು.
ಸುರಕ್ಷತೆಗೆ ಆದ್ಯತೆ
“ನಾವು ರೈಲು ಪ್ರಯಾಣದ ಸುರಕ್ಷತೆಯ ಮೇಲೆ ಗಮನ ಕೇಂದ್ರೀಕರಿಸುವುದನ್ನು ಮುಂದುವರಿಸುತ್ತೇವೆ. ಪ್ರತಿ ಘಟನೆಯ ಮೂಲ ಕಾರಣವನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತೇವೆ ಮತ್ತು ಅದು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತೇವೆʼʼ ಎಂದು ಸಚಿವರು ಭರವಸೆ ನೀಡಿದರು. ರೈಲ್ವೆ ಸುರಕ್ಷತಾ ಆಯುಕ್ತರು (CRS) ನಡೆಸಿದ ತನಿಖಾ ವರದಿಯನ್ನು ಇನ್ನೂ ಬಹಿರಂಗವಾಗಿಲ್ಲ. ಅದಾಗ್ಯೂ ಪ್ರಾಥಮಿಕ ತನಿಖೆಯು, ರಾಯಗಡ ಪ್ಯಾಸೆಂಜರ್ ರೈಲಿನ ಚಾಲಕ ಮತ್ತು ಸಹಾಯಕ ಚಾಲಕ ನಿಯಮಗಳನ್ನು ಉಲ್ಲಂಘಿಸಿ ಎರಡು ದೋಷಯುಕ್ತ ಆಟೋ ಸಿಗ್ನಲ್‌ಗಳನ್ನು ಹಾದು ಹೋಗಿದ್ದರಿಂದ ಅವಘಡ ನಡೆದಿದೆ ಎನ್ನುವುದನ್ನು ತಿಳಿಸಿದೆ. ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದರು.
ಇದನ್ನೂ ಓದಿ: Andhra Train Accident: ಆಂಧ್ರಪ್ರದೇಶ ರೈಲು ಅಪಘಾತದಲ್ಲಿ ಮಡಿದವರ ಸಂಖ್ಯೆ 13ಕ್ಕೆ ಏರಿಕೆ, ಮೃತರಿಗೆ 12 ಲಕ್ಷ ರೂ. ಪರಿಹಾರ
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಒಡಿಶಾ ದುರಂತ
ಇದಲ್ಲದೆ ಕಳೆದ ವರ್ಷ ಒಡಿಶಾದಲ್ಲೂ ಭೀಕರ ರೈಲು ದುರಂತ ಸಂಭವಿಸಿತ್ತು. ಜೂನ್ 2ರಂದು ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 288 ಜನರು ಸಾವನ್ನಪ್ಪಿದ್ದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ದೋಷದಿಂದ ಈ ದುರಂತ ಸಂಭವಿಸಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ