ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಇಂದು ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಬೈಜಾಲ್ ವೈಯಕ್ತಿಕ ಕಾರಣದಿಂದ ಹುದ್ದೆಯನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ. 2013ರಿಂದ ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ನಜೀಬ್ ಜಂಗ್ 2016ರಲ್ಲಿ ರಾಜೀನಾಮೆ ನೀಡಿದ ಬೆನ್ನಲ್ಲೇ ಬೈಜಾಲ್ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದರು. ದೆಹಲಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯ ಅವಧಿ ಇಂತಿಷ್ಟೇ ಎಂದು ಸೀಮಿತಗೊಳಿಸಿಲ್ಲ. ಹಾಗಾಗಿ ಐದು ವರ್ಷಗಳು ಕಳೆದರೂ ಅವರೇ ಹುದ್ದೆಯಲ್ಲಿ ಮುಂದುವರಿದಿದ್ದರು. ಹೀಗೆ ಏಕಾಏಕಿ ಅನಿಲ್ ಬೈಜಾಲ್ ರಾಜೀನಾಮೆ ನೀಡಿದ್ದು ಅಚ್ಚರಿ ತಂದಿದೆ.
ಅನಿಲ್ ಬೈಜಾಲ್ 1969ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದರು. ದೆಹಲಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ನೇಮಕಗೊಳ್ಳುವುದಕ್ಕೂ ಮೊದಲು ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಯೂ ಆಗಿದ್ದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಮುಖ್ಯ ಕಾರ್ಯರ್ಶಿಯಾಗಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ, ನಾಗರಿಕ ವಿಮಾನಯಾನದ ಜಂಟಿ ಕಾರ್ಯದರ್ಶಿಯಾಗಿ, ಇಂಡಿಯನ್ ಏರ್‌ಲೈನ್ಸ್‌ನ ಎಂಡಿ, ಪ್ರಸಾರ ಭಾರತಿ ಸಿಇಒ, ಗೋವಾ ಅಭಿವೃದ್ಧಿ ಆಯುಕ್ತರಾಗಿ, ದೆಹಲಿಯ ಮಾರಾಟ ತೆರಿಗೆ ಮತ್ತು ಅಬಕಾರಿ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ.
ದೆಹಲಿಯಲ್ಲಿ ಸ್ಥಳೀಯ ಸರ್ಕಾರವೇ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ಲೆಫ್ಟಿನೆಂಟ್ ಗವರ್ನರ್‌ಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಯಾವ ಅಧಿಕಾರವೂ ಇಲ್ಲ. ಈ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲು ಏರಿತ್ತು. ಸುಮಾರು ಒಂದು ವರ್ಷಗಳ ಕಾನೂನು ಹೋರಾಟದಲ್ಲಿ ಅಂತಿಮವಾಗಿ ಅರವಿಂದ್ ಕೇಜ್ರಿವಾಲ್‌ಗೇ ಜಯ ಸಿಕ್ಕಿತ್ತು. ಅಂದರೆ ದೆಹಲಿ ಆಡಳಿತಕ್ಕೆ ಸಂಬಂಧಪಟ್ಟಂತೆ ಲೆಫ್ಟಿನೆಂಟ್ ಗವರ್ನರ್‌ಗೆ ಸ್ವಾತಂತ್ರ್ಯ ಇಲ್ಲ ಎಂದು ಕೋರ್ಟ್ ಹೇಳಿತ್ತು.
ಇದನ್ನೂ ಓದಿ: ಪಂಜಾಬ್‌ನಲ್ಲಿ ದೆಹಲಿ ಮಾದರಿ: ರಾಜಧಾನಿಗೆ ಭೇಟಿ ನೀಡಿದ ಭಗವಂತ್ ಮನ್