Site icon Vistara News

ಜಾರ್ಜ್‌ ಆಪ್ತ, ಕುಂದಾಪುರದ ಅನಿಲ್‌ ಹೆಗ್ಡೆಗೆ ರಾಜ್ಯಸಭೆ ಟಿಕೆಟ್‌ ನೀಡಿದ ಜೆಡಿಯು

Anil Hegde JDU

ಪಟನಾ: ಬಿಹಾರದಿಂದ ಸಂಯುಕ್ತ ಜನತಾ ದಳ ಪಕ್ಷದ ರಾಜ್ಯಸಭಾ ಸದಸ್ಯರಾಗಿದ್ದ ಮಹೇಂದ್ರ ಪ್ರಸಾದ್‌ ನಿಧನದ ನಂತರ ತೆರವಾಗಿದ್ದ ಸ್ಥಾನಕ್ಕೆ ಉಪ-ಚುನಾವಣೆ ನಡೆಯಲಿದ್ದು, ಈ ಬಾರಿ ಜೆಡಿಯು ಕರ್ನಾಟಕ ಮೂಲದ ಅನಿಲ್‌ ಹೆಗ್ಡೆ (Anil Hegde) ಹೆಸರನ್ನು ಘೋಷಿಸಿದೆ. ಅನಿಲ್‌ ಹೆಗ್ಡೆ ಮೂಲತಃ ಕುಂದಾಪುರದವರು. ಹಿರಿಯ ಸಾಮಾಜಿಕ ಕಾರ್ಯಕರ್ತರಾಗಿದ್ದು, ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ರಿಗೆ ಪರಮಾಪ್ತರಾಗಿದ್ದರು. ಒಂದೊಮ್ಮೆ ಅನಿಲ್‌ ಹೆಗ್ಡೆ ರಾಜ್ಯ ಸಭೆಗೆ ಈ ಬಾರಿ ಆಯ್ಕೆಯಾದರೆ ಅವರ ಅವಧಿ 2024ರವರೆಗೆ ಇರಲಿದೆ. ಅನಿಲ್‌ ಹೆಗ್ಡೆ ತುಂಬ ವರ್ಷಗಳಿಂದ ಪಕ್ಷಕ್ಕಾಗಿ ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಇವರನ್ನು ಪಕ್ಷ ರಾಜ್ಯಸಭೆಗೆ ಆಯ್ಕೆ ಮಾಡಿದ್ದು ಅಚ್ಚರಿ ತಂದಿದ್ದರೂ, ಅವರ ಕೆಲಸಕ್ಕೆ ಸಂದ ಪ್ರತಿಫಲ ಎಂದು ಹೆಸರು ಹೇಳಲು ಇಚ್ಛಿಸದ ಜೆಡಿಯು ನಾಯಕರೊಬ್ಬರು ಹೇಳಿದ್ದಾರೆ.

ಸಾಧಕ ಕೃಷಿಕ, ದಣಿಯವರಿಯದ ಕಾಯಕ
ಜಾರ್ಜ್‌ ಫರ್ನಾಂಡಿಸ್‌ ರಕ್ಷಣಾ ಸಚಿವರಾಗಿದ್ದಾಗ ಹಲವು ವರ್ಷಗಳ ಕಾಲ ಅವರ ಆಪ್ತರಾಗಿದ್ದ ಅನಿಲ್‌ ಹೆಗ್ಡೆ, ಮೂಲತಃ ಕೃಷಿಕರು. ಕೃಷಿ ಕ್ಷೇತ್ರದಲ್ಲಿ ಪ್ರಯೋಗಗಳೊಂದಿಗೆ ಸಾಧನೆ ಮಾಡಿದವರು. 2014ರ ವೇಳೆ ತಂದೆ ಅನಾರೋಗ್ಯ ಕಾರಣದಿಂದ ಹುಟ್ಟೂರಿಗೆ ತೆರಳಿದ್ದ ಅವರು ಅದೇ ಸಮಯದಲ್ಲಿ ಕೃಷಿಯಲ್ಲೂ ಅಪಾರ ಸಾಧನೆ ಮಾಡಿದ್ದಾರೆ. ಸುಮಾರು 134 ವಿಧದ ದೇಸಿ ತಳಿಗಳ ಭತ್ತಗಳನ್ನು ಪ್ರಾಯೋಗಿಕವಾಗಿ ಬೆಳೆದು, ಯಶಸ್ವಿಯಾಗಿದ್ದರು. ಸದ್ಯ ಪಾಟ್ನಾದಲ್ಲಿಯೇ ಇರುವ ಅನಿಲ್‌ ಹೆಗ್ಡೆಯವರದ್ದು ಅತ್ಯಂತ ಸರಳ ಜೀವನ. ಮದುವೆಯಾಗದೆ ಉಳಿದ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿದ್ದುಕೊಂಡು, ನಿತೀಶ್‌ ಕುಮಾರ್‌ ಆಪ್ತರೆನಿಸಿಕೊಂಡಿದ್ದಾರೆ.

ಇದನ್ನೂ ಓದಿ | Explainer: ಶುರುವಾಗಿದೆ President Election ದಂಗಲ್‌

1960ರಲ್ಲಿ ಕುಂದಾಪುರದ ಸುಳ್ವಾಡಿಯಲ್ಲಿ ಜನಿಸಿದ ಅನಿಲ್‌ ಹೆಗ್ಡೆ ತಮ್ಮ ಪ್ರಾಥಮಿಕ ಶಿಕ್ಷಣವನ್ನೆಲ್ಲ ಬಿದ್ಕಲ್‌ಕಟ್ಟೆಯಲ್ಲಿ ಪೂರ್ಣಗೊಳಿಸಿದ್ದಾರೆ. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. 1983-84ರಿಂದಲೂ ರಾಜಕೀಯದಲ್ಲಿ ಸಕ್ರಿಯವಾಗಿರುವ ಅನಿಲ್‌ ಹೆಗ್ಡೆ ಮೊದಲ ಸೇರ್ಪಡೆಯಾಗಿದ್ದು ಜನತಾ ಎಂಬ ಪಕ್ಷಕ್ಕೆ. ಅದೇ ಮುಂದೆ ಜನತಾ ದಳ ಎಂದಾಯಿತು. ಅದಾಗಿ ಕೆಲ ವರ್ಷಗಳಲ್ಲಿ ಜಾರ್ಜ್‌ ಫರ್ನಾಂಡಿಸ್‌, ನಿತೀಶ್‌ ಕುಮಾರ್‌, ಅನಿಲ್‌ ಹೆಗ್ಡೆ ಸೇರಿ ಇತರ ನಾಯಕರು ಪಕ್ಷದಿಂದ ಪ್ರತ್ಯೇಕಗೊಂಡು ಸಮತಾ ಎಂಬ ಪಕ್ಷ ರಚಿಸಿದರು. ಅದು ಮುಂದೆ ಜನತಾ ದಳ (ಯುನೈಟೆಡ್‌) ಎಂದು ಬದಲಾಯಿತು. ಪಕ್ಷದಲ್ಲಿ ಏನೇ ಬದಲಾವಣೆಯಾಗಲಿ, ಯಾರೇ ಪಕ್ಷದಿಂದ ಹೊರ ಹೋದರೂ ಅನಿಲ್‌ ಹೆಗ್ಡೆ ಮಾತ್ರ ಎಂದಿಗೂ ಪಕ್ಷ ನಿಷ್ಠೆಯ ವಿಚಾರದಲ್ಲಿ ಬದಲಾಗಲೇ ಇಲ್ಲ.

ರಾಜ್ಯ ಸಭೆ ಉಪ ಚುನಾವಣೆಗೆ ಸಂಬಂಧಪಟ್ಟ ಅಧಿಸೂಚನೆಯನ್ನು ಚುನಾವಣಾ ಆಯೋಗ ಮೇ 12ರಂದು ಹೊರಡಿಸಿದೆ. ನಾಮಪತ್ರ ಸಲ್ಲಿಸಲು ಕೊನೇ ದಿನಾಂಕ ಮೇ 19. ಮೇ 30ರಂದು ಮುಂಜಾನೆ 9 ಗಂಟೆಯಿಂದ ಸಂಜೆ 4ಗಂಟೆವರೆಗೆ ಮತದಾನ ನಡೆಯಲಿದೆ. ಅದೇ ದಿನ ಸಂಜೆ ಮತ ಎಣಿಕೆ ನಡೆಯಲಿದೆ. ಬಿಹಾರದಲ್ಲಿ ಜೆಡಿಯು ಬಿಜೆಪಿಯ ಮೈತ್ರಿ ಪಕ್ಷವಾಗಿದ್ದು, ಅಲ್ಲಿ ಈ ಸಲ ಅನಿಲ್‌ ಹೆಗ್ಡೆ ಆಯ್ಕೆ ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ | ಬಿಜೆಪಿಯಿಂದ ದೂರ ನಡೆಯುತ್ತಾರ ನಿತೀಶ್‌?: ಬಿಹಾರದಲ್ಲಿ ಇಫ್ತಾರ್‌ʼ ರಾಜಕೀಯ

Exit mobile version