Site icon Vistara News

Anita Goyal: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಪತ್ನಿ ಅನಿತಾ ಗೋಯಲ್‌ ನಿಧನ

Anita Goyal

Anita Goyal

ಮುಂಬೈ: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ (Naresh Goyal) ಅವರ ಪತ್ನಿ ಅನಿತಾ ಗೋಯಲ್‌ (Anita Goyal) ಇಂದು (ಮೇ 16) ಮುಂಜಾನೆ ಮೃತಪಟ್ಟಿದ್ದಾರೆ. ಹಲವು ಸಮಯಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಮುಂಬೈಯ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ನರೇಶ್‌ ಗೋಯಲ್‌ ಅವರಿಗೆ ಇತ್ತೀಚೆಗೆ ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಅನಿತಾ ಅವರ ಅಂತ್ಯಕ್ರಿಯೆ ಇಂದು ಮುಂಬೈಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ನರೇಶ್‌ಗೂ ಕ್ಯಾನ್ಸರ್‌

ಇತ್ತ ನರೇಶ್‌ ಗೋಯಲ್‌ ಅವರಿಗೂ ಕ್ಯಾನ್ಸರ್‌ ಬಾಧಿಸಿದೆ. ಮೇ 3ರಂದು ನರೇಶ್ ಗೋಯಲ್ ಅವರ ವಕೀಲರು ಬಾಂಬೆ ಹೈಕೋರ್ಟ್‌ಗೆ ಜಾಮೀನಿಗಾಗಿ ಮನವಿ ಮಾಡಿದ್ದರು. ಜಾಮೀನು ಅರ್ಜಿಯ ಮೇಲಿನ ಆದೇಶವನ್ನು ಕಾಯ್ದಿರಿಸಿದ ನ್ಯಾಯಾಲಯವು ಮೊದಲು ಗೋಯಲ್ ಅವರನ್ನು ಮೇ 6ರವರೆಗೆ ದಾಖಲಿಸಿರುವ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡದಂತೆ ನಿರ್ದೇಶಿಸಿತ್ತು.

“ನನ್ನ ಹೆಂಡತಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ. ನನ್ನ ಮಗಳ ಆರೋಗ್ಯ ಕೂಡ ಹದಗೆಟ್ಟಿದೆ. ಜೈಲಿನಲ್ಲಿರುವ ನನ್ನ ಆರೋಗ್ಯ ಸ್ಥಿತಿಯೂ ಬಿಗಡಾಯಿಸಿದೆ. ನನ್ನನ್ನು ಜೆಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಸಾಲಿನಲ್ಲಿ ನಿಲ್ಲಲು ಕೂಡ ನನಗೆ ಆಗುವುದಿಲ್ಲ. ನನ್ನ ಕಾಲು ಮಡಚಲು ಸಹ ಆಗುತ್ತಿಲ್ಲ. ಹಾಗಾಗಿ, ನಾನು ಎಲ್ಲ ಭರವಸೆಯನ್ನು ಕಳೆದುಕೊಂಡಿದ್ದೇನೆ. ದಯಮಾಡಿ ನಾನು ಜೈಲಿನಲ್ಲೇ ಸಾಯಲು ಬಿಡಿ” ಎಂದು ನ್ಯಾಯಾಧೀಶರ ಎದುರು ನರೇಶ್‌ ಗೋಯಲ್‌ ಬಿಕ್ಕಳಿಸಿದ್ದರು ಎನ್ನಲಾಗಿದೆ. ನರೇಶ್‌ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಬಾಂಬೆ ಹೈಕೋರ್ಟ್‌ ಮೇ 6ರಂದು ಎರಡು ತಿಂಗಳ ಜಾಮೀನು ಮಂಜೂರು ಮಾಡಿತ್ತು.

ಏನಿದು ಪ್ರಕರಣ?

ನರೇಶ್‌ ಗೋಯಲ್‌ ಅವರು ಕೆನರಾ ಬ್ಯಾಂಕ್‌ನಿಂದ ಸಾಲ ಪಡೆದು, ಕೋಟ್ಯಂತರ ರೂ. ವಂಚಿಸಿದ ಪ್ರಕರಣ ಎದುರಿಸುತ್ತಿದ್ದು, ಇವರ ವಿರುದ್ಧ ಇ.ಡಿ ಅಧಿಕಾರಿಗಳು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ನರೇಶ್‌ ಗೋಯಲ್‌ ಅವರನ್ನು ಬಂಧಿಸಲಾಗಿತ್ತು.

1992ರಿಂದ ಪ್ರಾರಂಭವಾದ ಜೆಟ್​ ಏರ್​ವೇಸ್‌, ಒಂದು ಕಾಲದಲ್ಲಿ ಭಾರತದ ಅತಿದೊಡ್ಡ ಖಾಸಗಿ ಏರ್​ಲೈನ್​ ಆಗಿತ್ತು. ಲಾಭದಲ್ಲೇ ನಡೆಯುತ್ತಿತ್ತು. ಆದರೆ 2019ರಲ್ಲಿ ಕಂಪನಿ ದಿವಾಳಿ ಘೋಷಣೆ ಮಾಡಿದ್ದಲ್ಲದೆ, ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತು. 2021ರ ಜೂನ್​​ನಲ್ಲಿ ಜೆಟ್ ಏರ್​ ವೇ ಸ್‌ಅನ್ನು ಜಲನ್-ಕಾಲ್ರಾಕ್ ಒಕ್ಕೂಟ ಸ್ವಾಧೀನ ಪಡಿಸಿಕೊಂಡಿತು. ಅಲ್ಲದೆ, ಮತ್ತೆ ಜೆಟ್‌ ಏರ್‌ವೇಸ್‌ ವಿಮಾನಗಳು ಹಾರಾಟ ನಡೆಸಲಿವೆ ಎಂದು ಹೇಳಲಾಗಿತ್ತು. ಪ್ರಕರಣದಲ್ಲಿ ಈಗಾಗಲೇ ಜೆಟ್‌ ಏರ್‌ವೇಸ್‌, ನರೇಶ್ ಗೋಯಲ್‌‌ ಹಾಗೂ ಅವರ ಸಂಬಂಧಿಕರಿಗೆ ಸೇರಿದ 538 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ.

ಇದನ್ನೂ ಓದಿ: Jet Airways: ಕೆನರಾ ಬ್ಯಾಂಕ್​ಗೆ 538 ಕೋಟಿ ರೂ. ವಂಚನೆ; ಜೆಟ್​ ಏರ್​ ವೇ ಸಂಸ್ಥಾಪಕನ ವಿರುದ್ಧ ಸಿಬಿಐ ತನಿಖೆ ಪ್ರಾರಂಭ

Exit mobile version