Site icon Vistara News

ಗೆಳೆಯನಿಗಾಗಿ ಪಾಕ್‌ಗೆ ತೆರಳಿದ ತಾಯಿ ಬೇಕಾಗಿಲ್ಲ ಎಂದ ಮಕ್ಕಳು; ಎಲ್ಲ ಇದ್ದೂ ಅಂಜು ಈಗ ಅನಾಥೆ

Anju Nasrullah Love Story

Anju's location unknown after returning from Pak, her children say won't meet her

ನವದೆಹಲಿ: ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯನಿಗಾಗಿ ಗಂಡ, ಇಬ್ಬರು ಮಕ್ಕಳನ್ನು ಬಿಟ್ಟು ಕೆಲ ತಿಂಗಳ ಹಿಂದೆ ಪಾಕಿಸ್ತಾನಕ್ಕೆ (Pakistan) ತೆರಳಿ, ಪ್ರಿಯತಮ ನಸ್ರುಲ್ಲಾನನ್ನು ಮದುವೆಯಾಗಿದ್ದ ರಾಜಸ್ಥಾನದ ಅಂಜು (Anju) ಈಗ ಭಾರತಕ್ಕೆ ಬಂದಿದ್ದಾರೆ. ಅವರು ಭಾರತಕ್ಕೆ ಬಂದರೂ, ಗಂಡ, ಮಕ್ಕಳು, ಮಾವ ಇದ್ದರೂ ಅವರು ಅನಾಥರಾಗಿದ್ದಾರೆ. “ತಾಯಿಯನ್ನು ನಾವು ಭೇಟಿಯಾಗುವುದಿಲ್ಲ” ಎಂದು ಅಂಜು ಮಕ್ಕಳು ಹೇಳಿದ್ದು, ಎಲ್ಲ ಇದ್ದರೂ ಈಗ ಅಂಜು ಏಕಾಂಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಕೆಲ ದಿನಗಳ ಹಿಂದಷ್ಟೇ ಅಂಜು ಭಾರತಕ್ಕೆ ವಾಪಸಾಗಿದ್ದಾರೆ. ಆದರೆ, ಅಂಜು ಗಂಡ, ಮಾವ ಹಾಗೂ ಮಕ್ಕಳು ಇವರನ್ನು ಭೇಟಿಯಾಗಲು ಸುತಾರಾಂ ಬಯಸುತ್ತಿಲ್ಲ. ಅಂಜು ಅವರ ತಂದೆಯೂ ಮಗಳನ್ನೂ ಸ್ವೀಕರಿಸಲು ತಯಾರಿಲ್ಲ. ಇದರಿಂದಾಗಿ ಅಂಜು ಈಗ ಒಬ್ಬಂಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ. ಅಲ್ಲದೆ, ಭಾರತಕ್ಕೆ ಬಂದ ಅಂಜು ಈಗ ಎಲ್ಲಿದ್ದಾರೆ ಎಂಬ ಮಾಹಿತಿಯೂ ಇಲ್ಲ ಎನ್ನಲಾಗಿದೆ.

ಅಂಜು-ನಸ್ರುಲ್ಲಾ ವೈರಲ್‌ ವಿಡಿಯೊ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ತನ್ನ ಫೇಸ್‌ಬುಕ್ ಪತಿ ಪಾಕಿಸ್ತಾನದ ಪ್ರಜೆ ನಸ್ರುಲ್ಲಾ ಅವರೊಂದಿಗೆ ವಾಸಿಸುತ್ತಿದ್ದ 34 ವರ್ಷದ ಅಂಜು ವಾಘಾ ಗಡಿಯ ಮೂಲಕ ಭಾರತಕ್ಕೆ ಬಂದ ವಾಪಸ್ ಬಂದಿದ್ದಾಳೆ. ಈ ವೇಳೆ, ತನಿಖಾ ಸಂಸ್ಥೆಗಳು ಅನೇಕ ಸುತ್ತಿನ ವಿಚಾರಣೆ ನಡೆಸಿದ ಬಳಿಕವಷ್ಟೇ ಆಕೆಗೆ ತನ್ನ ಮನೆಗೆ ಹೋಗಲು ಅವಕಾಶ ಕಲ್ಪಿಸಲಾಯಿತು. ಅವಳನ್ನು ಈಗ ಅಮೃತಸರ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿಂದ ಅವರು ದೆಹಲಿಗೆ ತೆರಳಿದ್ದಾರೆ.

ತಪ್ಪಾಗಿದೆ ಎಂದಿದ್ದ ಅಂಜು

ಇದಕ್ಕೂ ಮೊದಲು ಅಂಜು ಅವರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದರು. “ಪಾಕಿಸ್ತಾನದಲ್ಲಿ ಎಲ್ಲವೂ ಚೆನ್ನಾಗಿದೆ. ನಾನು ಬೇರಾವುದೋ ಆಲೋಚನೆಗಳನ್ನು ಇಟ್ಟುಕೊಂಡು ಇಲ್ಲಿಗೆ ಬಂದಿದೆ. ಆದರೆ, ನಾನಿಲ್ಲಿ ಖುಷಿಯಿಂದ ಇಲ್ಲ. ನಾನು ಮಾಡಿದ ತಪ್ಪಿನ ಅರಿವಾಗಿದೆ. ಇಲ್ಲಿ ನಡೆದಿರುವುದಕ್ಕೆ ಭಾರತದಲ್ಲಿ ನನ್ನ ಕುಟುಂಬಸ್ಥರು ಅವಮಾನಿತರಾಗಿದ್ದಾರೆ. ಅವರು ನನ್ನಿಂದ ತೊಂದರೆ ಅನುಭವಿಸಿದ್ದಾರೆ. ನನ್ನ ಮಕ್ಕಳ ಮುಖವನ್ನು ನೆನೆದರೆ ನನಗೆ ಸಂಕಟವಾಗುತ್ತಿದೆ. ಹಾಗಾಗಿ, ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ” ಎಂಬುದಾಗಿ ಅಂಜು ಹೇಳಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: Anju Love Story: ಪಾಕ್‌ಗೆ ಹೋಗಿ ಪ್ರಿಯಕರನ ಮದ್ವೆಯಾಗಿದ್ದ ಅಂಜು ಭಾರತಕ್ಕೆ ವಾಪಸ್!

ಪ್ರೇಮಿಗಾಗಿ ಪಾಕಿಸ್ತಾನಕ್ಕೆ ಹೋದ ಅಂಜು ಇಸ್ಲಾಂಗೆ ಮತಾಂತರವಾಗಿದ್ದರು. ಮತಾಂತರದ ಬಳಿಕವೇ ಅವರು ನಸ್ರುಲ್ಲಾನನ್ನು ಮದುವೆಯಾಗಿದ್ದು, ಈಗ ಅವರ ಹೆಸರು ಫಾತಿಮಾ ಆಗಿದೆ. ಅಂಜು ಹಾಗೂ ನಸ್ರುಲ್ಲಾ ಅವರ ಪ್ರಿ ವೆಡ್ಡಿಂಗ್‌ ಶೂಟ್‌ ವಿಡಿಯೊ ಕೂಡ ಭಾರಿ ವೈರಲ್‌ ಆಗಿತ್ತು. ಇನ್ನು ಪತಿ ಹಾಗೂ ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ಓಡಿ ಹೋದ ಅಂಜು ನಮ್ಮ ಪಾಲಿಗೆ ಸತ್ತ ಹಾಗೆ ಎಂದು ಆಕೆಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version