Site icon Vistara News

Annamalai : ಅಣ್ಣಾಮಲೈ ವಿರುದ್ಧ ಸಿಎಂ ಸ್ಟಾಲಿನ್‌ ಮಾನನಷ್ಟ ಮೊಕದ್ದಮೆ, ಏನಿದು ಕೇಸ್?

K Annamalai

ಚೆನ್ನೈ : ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ (Annamalai) ಮಾನನಷ್ಟ ಮೊಕದ್ದಮೆ ಕೇಸ್‌ ದಾಖಲಿಸಿದ್ದಾರೆ. (DMK Files) ಕಳೆದ ಏಪ್ರಿಲ್‌ 14ರಂದು ಅಣ್ಣಾಮಲೈ ಅವರು ಡಿಎಂಕೆ ಫೈಲ್ಸ್‌ ಅನ್ನು ಬಿಡುಗಡೆಗೊಳಿಸಿದ್ದರು. ಡಿಎಂಕೆ ಮತ್ತು ಸಿಎಂ ಸ್ಟಾಲಿನ್‌ ಹಾಗೂ ಇತರ ನಾಯಕರ ವಿರುದ್ಧ ಅವ್ಯವಹಾರಗಳ ಆರೋಪವಿರುವ ಡಿಎಂಕೆ ಫೈಲ್ಸ್‌ ವರದಿಯನ್ನು ಅಣ್ಣಾಮಲೈ ಬಿಡುಗಡೆಗೊಳಿಸಿದ್ದರು. ಡಿಎಂಕೆ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು.

ಡಿಎಂಕೆ ನಾಯಕರು 2.24 ಲಕ್ಷ ಕೋಟಿ ರೂ. ಆಸ್ತಿಯನ್ನು ಹೊಂದಿದ್ದು, ಇದು ತಮಿಳುನಾಡು ಜಿಡಿಪಿಯ 10% ರಷ್ಟಾಗುತ್ತದೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ. ಡಿಎಂಕೆಯ ಇತರ ನಾಯಕರಾದ ಉದಯನಿಧಿ ಸ್ಟಾಲಿನ್‌, ಸಂಸದೆ ಕನಿಮೋಳಿ, ಟಿಆರ್‌ ಬಾಲು ಮತ್ತು ಆರ್‌ಎಸ್‌ ಭಾರತಿ ಕೂಡ ಅಣ್ಣಾಮಲೈ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಇದೀಗ ಸಿಎಂ ಸ್ಟಾಲಿನ್‌ ಕೂಡ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ನಗರ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜಿ. ದೇವರಾಜನ್‌ ಅವರು ಸ್ಟಾಲಿನ್‌ ಪರವಾಗಿ ಅರ್ಜಿ ಸಲ್ಲಿಸಿದರು. ಡಿಎಂಕೆ ಫೈಲ್ಸ್‌ ಬಿಡುಗಡೆಯ ಮೂಲಕ ಅಣ್ಣಾಮಲೈ ಅವರು ಸಿಎಂ ಸ್ಟಾಲಿನ್‌ ಅವರ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನ್ಯಾಯಮೂರ್ತಿ ಉಮಾ ಮಹೇಶ್ವರಿ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಪ್ರಕರಣದ ವಿಚಾರಣೆಯನ್ನು 8 ವಾರಗಳ ಕಾಲ ಮುಂದೂಡಲಾಗಿದೆ.

ಇದನ್ನೂ ಓದಿ : Karnataka Election : ಕಾಂಗ್ರೆಸ್‌ ಕೈ ಖಾಲಿಯಾಗಿದೆ, ಪ್ರಿಯಾಂಕ ಗಾಂಧಿ ಕೈಯಲ್ಲಿರುವುದೂ ದೋಸೆ ಮಾತ್ರ ಎಂದ ಅಣ್ಣಾಮಲೈ

ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌ಎಸ್‌ ಭಾರತಿ ಅವರು 500 ಕೋಟಿ ರೂ. ಪರಿಹಾರ ನಿರೀಕ್ಷಿಸಿ ಮೊಕದ್ದಮೆ ದಾಖಲಿಸಿದ್ದಾರೆ. ಚೆನ್ನೈನಲ್ಲಿ ಡಿಎಂಕೆ ಪ್ರಧಾನ ಕಚೇರಿಯ ಭೂಮಿಯ ಬೆಲೆ 960 ಕೋಟಿ ರೂ.ಗಳಾಗಿದೆ. ಪಕ್ಷದ ಯುವ ಘಟಕದ ಕಚೇರಿ ಆಸ್ತಿ 32 ಕೋಟಿ ರೂ. ಮೌಲ್ಯವಿದೆ. ಇತರ ಜಿಲ್ಲಾ ಕೇಂದ್ರಗಳಲ್ಲೂ ಹಲವು ಕೋಟಿ ರೂ. ಬೆಲೆಯ ಪ್ರಾಪರ್ಟಿಗಳನ್ನು ಹೊಂದಿದೆ. ಇದು ಭ್ರಷ್ಟಾಚಾರದಿಂದ ಗಳಿಸಿದ್ದು ಎಂದು ಅಣ್ಣಾಮಲೈ ಆರೋಪಿಸಿದ್ದರು. ಡಿಎಂಕೆ 3,474 ಕೋಟಿ ರೂ. ಮೌಲ್ಯದ ಶಾಲೆಗಳು, 34,184 ಕೋಟಿ ರೂ. ಮೌಲ್ಯದ ಯುನಿವರ್ಸಿಟಿಗಳನ್ನು ಹೊಂದಿದೆ ಎಂದು ಅಣ್ಣಾಮಲೈ ಆರೋಪಿಸಿದ್ದರು.

Exit mobile version