ಚೆನ್ನೈ, ತಮಿಳುನಾಡು: ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಹೇಗಾದರೂ ಮಾಡಿ ತನ್ನ ಅಸ್ತಿತ್ವವನ್ನು ಸಾಬೀತು ಪಡಿಸಲು ಮುಂದಾಗಿರುವ ಬಿಜೆಪಿಗೆ (BJP), ತಮಿಳುನಾಡು (Tamil Nadu) ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಅವರೇ ಅಡ್ಡಿಯಾಗುತ್ತಿರುವ ಹಾಗಿದೆ. ಯಾಕೆಂದರೆ, ಎಐಎಡಿಎಂಕೆ (AIADMK) ಮುಖ್ಯಮಂತ್ರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರು ಅಲ್ಲವೇ ಶಿಕ್ಷೆ ಕೂಡ ದೊರೆತಿತ್ತು ಎಂದು ಪರೋಕ್ಷವಾಗಿ ದಿವಂಗತ ಜೆ ಜಯಲಲಿತಾ ( j jayalalithaa) ವಿರುದ್ಧ ಅಣ್ಣಾಮಲೈ ಅವರು ಟೀಕೆ ಮಾಡಿದ್ದರು. ಈ ಟೀಕೆಗೆ ವ್ಯಗ್ರವಾಗಿರುವ ಎಐಎಡಿಎಂಕೆ, ಅಣ್ಣಾಮಲೈ ಅವರ ನಾಲಿಗೆ ಹಿಡಿತದಲ್ಲಿರಲಿ. ಹೀಗೆಯೇ ಮಾತನಾಡಿದರೆ ಬಿಜೆಪಿ ಜತೆಗಿನ ಮೈತ್ರಿಯ ಬಗ್ಗೆ ನಾವು ಪುನರ್ ಯೋಚಿಸಬೇಕಾಗುತ್ತದೆ ಎಂದು ಹೇಳಿದೆ. ಬಿಜೆಪಿ-ಎಐಎಡಿಎಂಕೆ ವಿರುದ್ದ ಆಗಾಗ ಈ ರೀತಿಯ ಹೇಳಿಕೆ ಪ್ರತಿ ಹೇಳಿಕೆಗಳನ್ನು ಕಾಣಬಹುದು.
ಬಿಜೆಪಿಯ ಕೇಂದ್ರ ನಾಯಕತ್ವ ನಮ್ಮೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೂ ಸಹ ಅಣ್ಣಾಮಲೈ ಅವರು ಮೈತ್ರಿಯನ್ನು ಮರುಪರಿಶೀಲಿಸುವಂಥ ಪರಿಸ್ಥಿತಿಗೆ ನಮ್ಮನ್ನು ಒತ್ತಾಯಿಸುತ್ತಿದ್ದಾರೆ ಎಂದು ಎಐಎಡಿಎಂಕೆ ವಕ್ತಾರ ಡಿ ಜಯಕುಮಾರ್ ಚೆನ್ನೈನಲ್ಲಿ ಹೇಳಿದ್ದಾರೆ.
ನಮ್ಮ ಸಾಮಾನ್ಯ ಮತ್ತು ಶಾಶ್ವತ ಶತ್ರು ಡಿಎಂಕೆಯನ್ನು ಟೀಕಿಸುವ ಬದಲು, ಅಣ್ಣಾಮಲೈ ಅವರು ನಿಧನರಾದ ನಮ್ಮ ನಾಯಕರನ್ನು ಟೀಕಿಸಿದ್ದಾರೆ, ಅಣ್ಣಾಮಲೈ ಇಂದು ಪ್ರತಿ ಎಐಎಡಿಎಂಕೆ ಕಾರ್ಯಕರ್ತರನ್ನು ಕೆರಳುವಂತೆ ಮಾಡುತ್ತಿದ್ದಾರೆ. ಅವರು ಆಡುತ್ತಿರುವ ಮಾತುಗಳು ಮೈತ್ರಿ ಮುಂದುವರಿಯುವುದನ್ನು ಅವರು ಬಯಸುವುದಿಲ್ಲ ಎಂದು ತೋರಿಸುತ್ತವೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೆ ಬಾರಿಗೆ ಬಯಸುವುದಿಲ್ಲವೇ ಎಂಬ ಅನುಮಾನವನ್ನು ಹುಟ್ಟುಹಾಕುತ್ತದೆ ಎಂದು ಜಯಕುಮಾರ್ ಹೇಳಿದ್ದಾರೆ.
ಸೋಮವಾರ ಪ್ರಕಟವಾದ ಆಂಗ್ಲ ದೈನಿಕವೊಂದಕ್ಕೆ ಅಣ್ಣಾಮಲೈ ನೀಡಿದ ಸಂದರ್ಶನಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಉಗ್ರವಾಗಿ ಪ್ರತಿಕ್ರಿಯಿಸಿದೆ. ಈ ಸಂದರ್ಶನದಲ್ಲಿ ಅಣ್ಣಾಮಲೈ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳು ಶಿಕ್ಷೆಗೆ ಗುರಿಯಾಗಿರುವ ತಮಿಳುನಾಡು ಭ್ರಷ್ಟ ರಾಜ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದ್ದರು. ಇದು ದಿವಂಗತ ಜಯಲಲಿತಾ ಅವರನ್ನು ಉದ್ದೇಶಿಸಿ ಹೇಳಲಾದ ಟೀಕೆ ಎಂದು ಎಐಎಡಿಎಂಕೆ ಭಾವಿಸಿದೆ.
ಈ ಸುದ್ದಿಯನ್ನೂ ಓದಿ: ಅಣ್ಣಾಮಲೈ ವಿರುದ್ಧ ಆಕ್ರೋಶ: ತ.ನಾಡು ಬಿಜೆಪಿ ತೊರೆದು ಎಐಎಡಿಎಂಕೆ ಸೇರಿದ 13 ಪದಾಧಿಕಾರಿಗಳು
ಡಿಸೆಂಬರ್ 2016 ರಲ್ಲಿ ಜಯಲಲಿತಾ ಅವರ ಮರಣದ ನಂತರ 2017ರಲ್ಲಿ ಸುಪ್ರೀಂ ಕೋರ್ಟ್ ಬೆಂಗಳೂರು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತ ಹಿಡಿಯಿತು. 1991-1996 ರ ಅವಧಿಯಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಸೇರಿದಂತೆ ಇತರರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು.
ದೇಶದ ಇನ್ನಷ್ಟು ಕುತೂಹಲಕರ ಸದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.