ನವದೆಹಲಿ: ಭಾರತದಲ್ಲಿ ಇನ್ನೊಂದು ಕೊವಿಡ್ 19 ಲಸಿಕೆ ಅಭಿವೃದ್ಧಿಯಾಗಿದೆ. ಆದರಿದು ಮನುಷ್ಯರಿಗಾಗಿ ಅಲ್ಲ, ಪ್ರಾಣಿಗಳಿಗಾಗಿ. ಜಗತ್ತಿನಾದ್ಯಂತ ಕೊರೊನಾ ಸೋಂಕಿಗೆ ಒಳಗಾಗಿದ್ದು ಮನುಕುಲ ಮಾತ್ರವಲ್ಲ. ಅದೆಷ್ಟೋ ಬೆಕ್ಕು, ನಾಯಿ, ಹುಲಿ, ಸಿಂಹ, ಗೋರಿಲ್ಲಾ, ಚಿರತೆಗಳಲ್ಲೂ ಕೊರೊನಾ ಪತ್ತೆಯಾಗುತ್ತಿದೆ. ಹೀಗಾಗಿ ಮೂಕ ಪ್ರಾಣಿಗಳ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಮೊಟ್ಟಮೊದಲ ಸ್ವದೇಶಿ ಕೊರೊನಾ ಲಸಿಕೆ ಅನೊಕೋವಾಕ್ಸ್ (Anocovax)ತಯಾರಿಸಲಾಗಿದೆ. ಪ್ರಾಣಿಗಳ ಈ ಕೊವಿಡ್ 19 ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು ಹರ್ಯಾಣದ ಐಸಿಎಆರ್-ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಎಕ್ವೈನ್ಸ್(NRC). ಗುರುವಾರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್ ಲಸಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಅನೋಕೊವಾಕ್ಸ್ ಎಂಬುದು ಒಂದು ನಿಷ್ಕ್ರಿಯಗೊಳಿಸಿದ SARS-CoV-2 Delta (COVID-19) ಲಸಿಕೆ. ಇದನ್ನು ಪ್ರಾಣಿಗಳಿಗೆ ಕೊಟ್ಟಾಗ ಅವರಲ್ಲಿ ಉತ್ಪತ್ತಿಯಾಗುವ ಪ್ರತಿರೋಧಕ ಶಕ್ತಿಯು ಕೊವಿಡ್ 19ನ ಡೆಲ್ಟಾ ಮತ್ತು ಒಮಿಕ್ರಾನ್ ವೈರಾಣುಗಳನ್ನು ತಟಸ್ಥಗೊಳಿಸುತ್ತದೆ. ನಾಯಿ, ಸಿಂಹ, ಚಿರತೆ, ಇಲಿ ಮತ್ತು ಮೊಲಗಳಿಗೆ ತುಂಬ ಸುರಕ್ಷಿತವಾದ ಲಸಿಕೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ಏರ್‌ಪೋರ್ಟ್‌ಗಳಲ್ಲಿ ಇನ್ನು ಈ ನಿಯಮ ಕಡ್ಡಾಯ; ಪಾಲಿಸದೆ ಇದ್ದರೆ ವಿಮಾನ ಹತ್ತಲು ಸಿಗದು ಅವಕಾಶ !
ಅನೋಕೊವಾಕ್ಸ್ ಕೊರೊನಾ ಲಸಿಕೆಯೊಂದಿಗೆ, ಪ್ರಾಣಿಗಳಲ್ಲಿ ಸಾರ್ಸ್ ಕೊವ್ 2 ವಿರುದ್ಧದ ಪ್ರತಿಕಾಯ ಪತ್ತೆ ಹಚ್ಚುವ CAN-CoV-2 ELISA kit ಕೂಡ ಕೃಷಿ ಸಚಿವ ನರೇಂದ್ರ ತೋಮಾರ್ ಬಿಡುಗಡೆ ಮಾಡಿದ್ದಾರೆ. ಇದೂ ಕೂಡ ಭಾರತದಲ್ಲೇ ತಯಾರಾಗಿದೆ. ಈ ಕಿಟ್ ಪ್ರಾಣಿಗಳ ದೇಹದಲ್ಲಿ ಇರುವ ಪ್ರತಿಜನಕ ಮಟ್ಟವನ್ನು ನಿಖರವಾಗಿ ಪತ್ತೆ ಹಚ್ಚಲು ತುಂಬ ಸಹಕಾರಿಯಾಗಿದೆ. ಈ ವೇಳೆ ಐಸಿಎಆರ್ ನಿರ್ದೇಶಕ ಜನರಲ್ ತ್ರಿಲೋಚನ್ ಮೋಹಪಾತ್ರಾ, ಪಶುಪಾಲನೆ ಮತ್ತು ಹೈನುಗಾರಿಕೆ ಕಾರ್ಯದರ್ಶಿ ಅತುಲ್ ಚತುರ್ವೇದಿ, ಐಸಿಎಆರ್ ಡೆಪ್ಯೂಟಿ ನಿರ್ದೇಶಕ ಜನರಲ್ (ಪ್ರಾಣಿ ವಿಜ್ಞಾನ) ಭೂಪೇಂದ್ರ ನಾಥ್‌ತ್ರಿಪಾಠಿ ಇತರರು ಇದ್ದರು.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ವೈರಸ್; ಇಂದು 7 ಸಾವಿರಕ್ಕೂ ಅಧಿಕ ಕೇಸ್ ದಾಖಲು