Site icon Vistara News

Cheetah Dies: ಮತ್ತೊಂದು ಚೀತಾ ಸಾವು! 4 ತಿಂಗಳಲ್ಲಿ ಒಟ್ಟು 7 ಚೀತಾಗಳು ಮೃತ, ಏನು ಕಾರಣ?

Cheetah

ಭೋಪಾಲ್, ಮಧ್ಯ ಪ್ರದೇಶ: ಇಲ್ಲಿನ ಕುನೋ ನ್ಯಾಷನಲ್ ಪಾರ್ಕ್‌(Kuno National Park- KNP)ನಲ್ಲಿ ಮತ್ತೊಂದು ಗಂಡು ಚೀತಾ ಮೃತಪಟ್ಟ (Cheetah Dies) ಘಟನೆ ಮಂಗಳವಾರ ನಡೆದಿದೆ. ಇದರೊಂದಿಗೆ ಕಳೆದ ನಾಲ್ಕು ತಿಂಗಳಲ್ಲಿ ಒಟ್ಟು ಮೃತಪಟ್ಟ ಚೀತಾಗಳ ಸಂಖ್ಯೆ ಏಳಕ್ಕೇರಿದೆ. ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಚಿರತೆಯ ಕತ್ತಿನ ಮೇಲೆ ಗಾಯಗಳನ್ನು ಗಮನಿಸಿದ ಮೇಲ್ವಿಚಾರಣಾ ತಂಡವು ಈ ಬಗ್ಗೆ ವೈದ್ಯರಿಗೆ ಸೂಚಿಸಿತ್ತು. ಬಳಿಕ ಚೀತಾವನ್ನು ಪರೀಕ್ಷಿಸಿದ ವೈದ್ಯರು ಚಿಕಿತ್ಸೆ ನೀಡಿದ್ದರು.

ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗಂಡು ಚೀತಾ ತೇಜಸ್ ಮೃತಪಟ್ಟಿರುವುದು ಪತ್ತೆಯಾಗಿದೆ. ಚೀತಾ ಗಾಯಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣವನ್ನು ಕಂಡುಹಿಡಿಯಬಹುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ ಎಸ್ ಚೌಹಾಣ್ ಅವರು ಹೇಳಿದ್ದಾರೆ.

ಮಾರ್ಚ್ 27ರಂದು ಹೆಣ್ಣು ಚೀತಾ ಸಾಶಾ ಕಿಡ್ನಿ ವೈಫಲ್ಯದಿಂದ ಸತ್ತಿತ್ತು. ಏಪ್ರಿಲ್ 23ರಂದು ಉದಯ್ ಹೆಸರಿನ ಚೀತಾ ಮೃತಪಟ್ಟರೆ, ಮೇ 9ರಂದು ದಕ್ಷ ಹೆಣ್ಣು ಚೀತಾ ಮೃತಪಟ್ಟಿದ್ದವು. ಹಾಗೆಯೇ, ಮೇ 25ರಂದು ಎರಡು ಚೀತಾ ಮರಿಗಳು ಸಾವನ್ನಪ್ಪಿದ್ದವು.

ಈ ಸುದ್ದಿಯನ್ನೂ ಓದಿ: ಚೀತಾಗಳನ್ನು ರಾಜಸ್ಥಾನದಲ್ಲಿ ಬಿಡಿ, ಪ್ರತಿಪಕ್ಷದ ಆಡಳಿತ ಇದೆ ಎಂದು ನಿರಾಕರಿಸಬೇಡಿ; ಸುಪ್ರೀಂಕೋರ್ಟ್ ಸೂಚನೆ

ಮೇಲಿಂದ ಮೇಲೆ ಚೀತಾಗಳು ಸಾಯುತ್ತಿರುವುದನ್ನು ಗಮನಿಸಿದ ದಕ್ಷಿಣ ಆಫ್ರಿಕಾದ ವನ್ಯಜೀವಿ ತಜ್ಞ ವಿನ್ಸೆಂಟ್ ವ್ಯಾಂಡೇರ್ ಮೇರ್ವೆ ಅವರು ಇನ್ನೂ ಹೆಚ್ಚಿನ ಚೀತಾಗಳ ಸಾವು ನಿರೀಕ್ಷಿಸಬಹುದಾಗಿದೆ ಎಂದು ಹೇಳಿದ್ದರು. ಮುಂದಿನ ಕೆಲವು ದಿನಗಳಲ್ಲಿ ಈ ಚೀತಾ ಮರು ಪರಿಚಯ ಪ್ರಾಜೆಕ್ಟ್‌ನಲ್ಲಿ ಇನ್ನೂ ಹೆಚ್ಚಿನ ಮರಣ ಪ್ರಮಾಣವನ್ನು ಕಾಣಬಹುದಾಗಿದೆ. ಚೀತಾಗಳು ತಮ್ಮ ಗಡಿಗಳನ್ನು ಗುರುತಿಸುವ ವೇಳೆ, ಕಾಡಿನಲ್ಲಿ ಚಿರತೆ ಮತ್ತು ಹುಲಿಗಳೊಂದಿಗೆ ಸಂಘರ್ಷ ಏರ್ಪಟ್ಟು ಸಾವಿನ ಪ್ರಮಾಣ ಹೆಚ್ಚಾಗಬಹುದು ಎಂದು ಹೇಳಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version