ತಿರುವನಂತಪುರಂ: “ಮೋದಿ ಉಪನಾಮ ಇರುವ ಎಲ್ಲರೂ ಕಳ್ಳರೇ” ಎಂಬ ಹೇಳಿಕೆ ನೀಡುವ ಮೂಲಕ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ, ಲೋಕಸಭೆಯಿಂದಲೇ ಅನರ್ಹಗೊಂಡಿದ್ದಾರೆ. ಇದರ ಕುರಿತು ಬಿಜೆಪಿ ಹಾಗೂ ಪ್ರತಿಪಕ್ಷಗಳ ಮಧ್ಯೆ ವಾಕ್ಸಮರ ಶುರುವಾಗಿದೆ. ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದೂ ಆರೋಪಿಸಲಾಗುತ್ತಿದೆ. ಈ ಪ್ರಕರಣಕ್ಕೆ ಬೇರೆ ದೇಶಗಳೂ ಪ್ರತಿಕ್ರಿಯಿಸುವಂತಾಗಿದೆ. ಇದರ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸಿದ್ದ ಕೇರಳದ ವಯನಾಡಿನಿಂದಲೇ ಚುನಾವಣೆಗೆ ನಿಂತಿದ್ದ ಮತ್ತೊಬ್ಬ ರಾಹುಲ್ ಗಾಂಧಿ (Rahul Gandhi KE) ಕೂಡ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಂಡಿದ್ದಾರೆ.
ಹೌದು, ಅಚ್ಚರಿ ಎನಿಸಿದರೂ ಈ ಸುದ್ದಿ ನಿಜ. 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಕೆ.ಇ ತಂದೆ ವಲ್ಸಮ್ಮ ಎಂಬುವರನ್ನು ಚುನಾವಣೆ ಆಯೋಗವು ಮೂರು ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಿದೆ. ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಿರುವ ಪಟ್ಟಿಯನ್ನು ಚುನಾವಣೆ ಆಯೋಗವು ಬಿಡುಗಡೆಗೊಳಿಸಿದ್ದು, ಇವರಲ್ಲಿ ರಾಹುಲ್ ಗಾಂಧಿ ಕೆ.ಇ ಅವರ ಹೆಸರು ಕೂಡ ಇದೆ ಎಂದು ತಿಳಿದುಬಂದಿದೆ. ಯಾವುದೇ ಪ್ರಮುಖ ನಾಯಕನ ವಿರುದ್ಧ ಅದೇ ಹೆಸರಿನವರು ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಮಾನ್ಯ. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ಹೆಸರಿನ ಹಲವರು ಸ್ಪರ್ಧಿಸಿದ್ದರು.
ರಾಹುಲ್ ಗಾಂಧಿ ಕೆ.ಇಗೆ ನಿಷೇಧ ಏಕೆ?
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಕೆ.ಇ, ಒಟ್ಟು 2,196 ಮತಗಳನ್ನು ಪಡೆದಿದ್ದರು. ಇವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಚುನಾವಣೆ ಬಳಿಕ ಆಯೋಗಕ್ಕೆ ರಾಹುಲ್ ಗಾಂಧಿ ಕೆ.ಇ ಅವರು ಚುನಾವಣೆಯ ವೇಳೆ ಮಾಡಿದ ಖರ್ಚು-ವೆಚ್ಚದ ಮಾಹಿತಿ ನೀಡಿರಲಿಲ್ಲ. ಆದರೆ, ಚುನಾವಣೆ ಆಯೋಗದ ನಿಯಮಗಳು ಮತ್ತು ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಅಭ್ಯರ್ಥಿಯು ಚುನಾವಣೆ ವೆಚ್ಚದ ಕುರಿತು ಮಾಹಿತಿ ನೀಡಬೇಕು. ಇಲ್ಲದಿದ್ದರೆ ಅವರು ಚುನಾವಣೆ ಸ್ಪರ್ಧೆಯಿಂದ ಅನರ್ಹರಾಗುತ್ತಾರೆ. ಇದೇ ನಿಯಮದ ಅನ್ವಯ, ಆಯೋಗವು ರಾಹುಲ್ ಗಾಂಧಿ ಕೆ.ಇ ಅವರನ್ನು ಮೂರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಿದೆ.
ಚುನಾವಣೆ ಆಯೋಗವು ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಅನರ್ಹಗೊಳಿಸಿರುವ ಅಭ್ಯರ್ಥಿಗಳ ಪಟ್ಟಿಯನ್ನು ಮಾರ್ಚ್ 29ರಂದು ಪ್ರಕಟ ಮಾಡಿದೆ. ಪಟ್ಟಿಯ ಪ್ರಕಾರ, 33 ವರ್ಷದ ರಾಹುಲ್ ಗಾಂಧಿ ಕೆ.ಇ ಅವರು 2021ರ ಸೆಪ್ಟೆಂಬರ್ 13ರಿಂದ 2024ರ ಸೆಪ್ಟೆಂಬರ್ 13ರವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಇವರು ಕೊಟ್ಟಾಯಂ ಜಿಲ್ಲೆಯವರಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇನ್ನು ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಾರ್ಚ್ 23ರಂದು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿರುವ ಸೂರತ್ ನ್ಯಾಯಾಲಯವು, ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಅವಕಾಶ ನೀಡಿದೆ.
ಇದನ್ನೂ ಓದಿ: 2013ರಲ್ಲಿ ರಾಹುಲ್ ಗಾಂಧಿ ಸುಗ್ರೀವಾಜ್ಞೆ ಹರಿಯದಿದ್ದರೆ ಈಗ ಅನರ್ಹರಾಗುತ್ತಿರಲಿಲ್ಲ, ಏನದು ಸುಗ್ರೀವಾಜ್ಞೆ?