ನವದೆಹಲಿ: ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಘೋಷಣೆಗಳನ್ನು (Anti Brahmin Slogans) ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಆಕ್ರೋಶಕ್ಕೆ ವ್ಯಕ್ತವಾದ ಬೆನ್ನಲ್ಲೇ ವಿವಿ ಕುಲಪತಿಯವರು ಘಟನೆ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕುಂದುಕೊರತೆ ಸಮಿತಿಗೆ ಆದೇಶಿಸಿದ್ದಾರೆ.
“ಜೆಎನ್‌ಯು ಕಟ್ಟಡಗಳ ಗೋಡೆಗಳ ಮೇಲೆ ಅವಹೇಳನಕಾರಿ ಸಾಲುಗಳನ್ನು ಬರೆದಿರುವುದನ್ನು ಜೆಎನ್‌ಯು ಕುಲಪತಿ ಸಂತಿಶ್ರೀ ಡಿ ಪಂಡಿತ್ ಅವರು ಖಂಡಿಸಿದ್ದಾರೆ. ಹಾಗೆಯೇ, ಘಟನೆ ಕುರಿತು ಶೀಘ್ರವೇ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕುಂದುಕೊರತೆ ಸಮಿತಿಯ ಡೀನ್ ಅವರಿಗೆ ಆದೇಶಿಸಿದ್ದಾರೆ” ಎಂದು ವಿವಿ ಪ್ರಕಟಣೆ ತಿಳಿಸಿದೆ. ‘ಬ್ರಾಹ್ಮಣರೇ ವಿವಿ ಬಿಟ್ಟು ತೊಲಗಿ, ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ’ ಎಂಬುದು ಸೇರಿ ಹಲವು ಘೋಷಣೆಗಳನ್ನು ಗೋಡೆಗಳ ಮೇಲೆ ಬರೆಯಲಾಗಿತ್ತು. ಇದರ ವಿರುದ್ಧ ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿತ್ತು.
ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ಬ್ರಾಹ್ಮಣ ವಿರೋಧಿ ಸಾಲುಗಳನ್ನು ಬರೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ. ಜೆಎನ್‌ಯು ಎಬಿವಿಪಿ, ಜೆಎನ್‌ಯು ಟೀಚರ್ಸ್ ಅಸೋಸಿಯೇಷನ್ ಸೇರಿ ಹಲವು ಸಂಘಟನೆಗಳು ಘಟನೆಯನ್ನು ಖಂಡಿಸುವ ಜತೆಗೆ ನ್ಯಾಯಸಮ್ಮತ ತನಿಖೆಯಾಗಬೇಕು ಎಂದು ಒತ್ತಾಯಿಸಿವೆ.
ಇದನ್ನೂ ಓದಿ | Anti Brahmin Slogans | ಜೆಎನ್‌ಯು ಗೋಡೆ ಮೇಲೆ ಬ್ರಾಹ್ಮಣ ವಿರೋಧಿ ಸಾಲುಗಳು, ಎಡಪಂಥೀಯರ ವಿರುದ್ಧ ಆಕ್ರೋಶ