Site icon Vistara News

Breaking: ಸ್ಫೋಟದ ಆರೋಪಿಗಳನ್ನು ಬಂಧಿಸಿದ ವೇಳೆ ಎನ್‌ಐಎ ವಾಹನದ ಮೇಲೆ ಕಲ್ಲುತೂರಾಟ!

West Bengal

Anti-terror agency team attacked in West Bengal's East Medinipur, officer injured

ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ (West Bengal) ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಣಗಳು, ಹಿಂಸಾಚಾರ ಆಗಾಗ ನಡೆಯುತ್ತಲೇ ಇರುತ್ತವೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ, ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆ ಸೇರಿ ಹಲವು ಪ್ರಕರಣಗಳು ಸುದ್ದಿಯಾಗುತ್ತವೆ. ಆದರೆ, ಇತ್ತೀಚೆಗೆ, ತನಿಖಾ ಸಂಸ್ಥೆಗಳ ಅಧಿಕಾರಿಗಳ ಮೇಲೆಯೂ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳ ಮೇಲೆಯೇ ಜನ ದಾಳಿ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಭೂಪತಿನಗರದಲ್ಲಿ 2022ರಲ್ಲಿ ಟಿಎಂಸಿ ನಾಯಕರೊಬ್ಬರ ಮನೆಯಲ್ಲಿ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎನ್‌ಐಎ ಅಧಿಕಾರಿಗಳು ಶನಿವಾರ (ಏಪ್ರಿಲ್‌ 6) ತೆರಳಿದ್ದರು. ಇದೇ ವೇಳೆ ಮಹಿಳೆಯರು ಸೇರಿ ಒಂದಷ್ಟು ಜನ ಎನ್‌ಐಎ ಅಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ದಾಳಿಯ ವೇಳೆ ಎನ್‌ಐಎ ತಂಡದ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಎನ್‌ಐಎ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೊ ಕೂಡ ಲಭ್ಯವಾಗಿದೆ.

ಟಿಎಂಸಿ ಮುಖಂಡನ ಮನೆಯಲ್ಲಿ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಶನಿವಾರ ಬೆಳಗಿನ ಜಾವ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಅವರನ್ನು ಕೋಲ್ಕೊತಾಗೆ ಕರೆದುಕೊಂಡು ಹೋಗುವಾಗ ಎನ್‌ಐಎ ಅಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ದೊಣ್ಣೆಗಳಿಂದಲೂ ಜನ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಇ.ಡಿ ಅಧಿಕಾರಿಗಳ ಮೇಲೆಯೂ ದಾಳಿ ನಡೆದಿತ್ತು

ಕಳೆದ ಜನವರಿಯಲ್ಲಿ ಉತ್ತರ 24 ಪರಗಣ ಜಿಲ್ಲೆಯಲ್ಲಿ ಪಡಿತರ ವಿತರಣೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ತೆರಳಿದ ಜಾರಿ ನಿರ್ದೇಶನಾಲಯದ (E.D) ಅಧಿಕಾರಿಗಳ ವಾಹನದ ಮೇಲೆಯೇ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ದಾಳಿಯ ತೀವ್ರತೆಗೆ ಇ.ಡಿ ಅಧಿಕಾರಿಗಳು ಇದ್ದ ವಾಹನದ ನಾಲ್ಕೂ ಕಿಟಕಿಗಳು ಪುಡಿಪುಡಿಯಾಗಿದ್ದವು.

ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಪ್ರದೇಶದ ಹಲವೆಡೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಪಡಿತರ ವಿತರಣೆ ವೇಳೆ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ್ದರು. ಆದರೆ, ಇದೇ ಪ್ರಕರಣದಲ್ಲಿ ಟಿಎಂಸಿ ಸ್ಥಳೀಯ ಮುಖಂಡ ಶಹಜಹಾನ್ ಶೇಖ್‌ ಎಂಬುವರ ಮನೆಯ ಮೇಲೆ ದಾಳಿ ನಡೆಸಲು ಇ.ಡಿ ಅಧಿಕಾರಿಗಳು ಮುಂದಾಗಿದ್ದರು. ಇದೇ ವೇಳೆ, ಇ.ಡಿ ಅಧಿಕಾರಿಗಳ ವಾಹನದ ಮೇಲೆ ದುಷ್ಕರ್ಮಿಗಳು ಕಲ್ಲುತೂರಾಟ ಮಾಡಿದ್ದರು. ದಾಳಿಯಲ್ಲಿ ಇ.ಡಿ ಕೆಲ ಅಧಿಕಾರಿಗಳಿಗೆ ಗಾಯಗಳಾಗಿದ್ದವು.

ಇದನ್ನೂ ಓದಿ: Viral video: ಟೋಲ್‌ ಪ್ಲಾಜಾದಲ್ಲಿ ಬಂದೂಕುಧಾರಿಗಳ ದಾಳಿ; ಬಾವಿಗೆ ಬಿದ್ದು ಇಬ್ಬರು ಸಾವು; ವಿಡಿಯೋ ಇದೆ

Exit mobile version