ಪ್ರತಿ ವರ್ಷ ಮೇ 21ರಂದು ಭಯೋತ್ಪಾದನಾ ವಿರೋಧಿ ದಿನವನ್ನು (Anti Terrorism Day) ಆಚರಿಸಲಾಗುತ್ತದೆ. ಈ ದಿನ ಯುವಕರಿಗೆ ಭಯೋತ್ಪಾದನೆ (Terrorism) ಮತ್ತು ಇದರಿಂದಾಗುವ ಸಾವು ನೋವು ಮತ್ತು ಜೀವನದ ಮೇಲೆ ಅದರ ದುಷ್ಪರಿಣಾಮದ ಬಗ್ಗೆ ಜಾಗೃತಿ (awareness) ಮೂಡಿಸಲಾಗುತ್ತದೆ. ಈ ದಿನವು ಸಮಾಜ ವಿರೋಧಿ ಕೃತ್ಯದ ವಿರುದ್ಧ ಜನರಲ್ಲಿ ಅರಿವು ಮೂಡಿಸುತ್ತದೆ.
ರಾಷ್ಟ್ರೀಯ ಸಾಮರಸ್ಯವನ್ನು ಉತ್ತೇಜಿಸುವುದು, ಭಯೋತ್ಪಾದನೆಯನ್ನು ತಗ್ಗಿಸುವುದು ಮತ್ತು ಎಲ್ಲಾ ಜಾತಿ, ಧರ್ಮ, ಲಿಂಗಗಳ ಜನರನ್ನು ಒಂದುಗೂಡಿಸುವುದು ಭಯೋತ್ಪಾದನಾ ವಿರೋಧಿ ದಿನದ ಮುಖ್ಯ ಉದ್ದೇಶವಾಗಿದೆ. ವಿಶ್ವದಾದ್ಯಂತ ಹೆಚ್ಚುತ್ತಿರುವ ‘ಭಯೋತ್ಪಾದನೆ’ ಹಿನ್ನೆಲೆಯಲ್ಲಿ ಈ ದಿನವು ಈಗ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ.
ಪ್ರತಿ ದಿನವೂ ವಿಶ್ವದ ಒಂದಲ್ಲ ಒಂದು ಕಡೆ ಭಯೋತ್ಪಾದಕ ಕೃತ್ಯದ ಬಗ್ಗೆ ಸುದ್ದಿಗಳು ಬರುತ್ತಲೇ ಇರುತ್ತವೆ. ಮೂಲಭೂತವಾಗಿ ಭಯೋತ್ಪಾದಕರು ಸಾಮಾನ್ಯ ಜನರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸಲು ಬಯಸುತ್ತಾರೆ. ಯಾವುದೇ ರೀತಿಯ ಪಶ್ಚಾತ್ತಾಪವಿಲ್ಲದೆ ಅವರು ಅಮಾಯಕ ಜನರ ಸಾವಿಗೆ ಕಾರಣರಾಗುತ್ತಾರೆ. ಇಂಥ ಭಯೋತ್ಪಾದನೆ ಚಟುವಟಿಕೆಗಳ ವಿರುದ್ಧ ಹೋರಾಡುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಭಾರತ ಸರ್ಕಾರ ಪ್ರತಿ ವರ್ಷ ಭಯೋತ್ಪಾದನೆ ವಿರೋಧಿ ದಿನವನ್ನು ಆಚರಿಸುತ್ತಿದೆ.
ಮೇ 21ರಂದು ಈ ದಿನಾಚರಣೆ ಏಕೆ?
1991ರ ಮೇ 21ರಂದು ಭಾರತದ ಏಳನೇ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯ ಅನಂತರ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನದ ಅಧಿಕೃತ ಘೋಷಣೆಯನ್ನು ಮಾಡಲಾಯಿತು. ಶ್ರೀಲಂಕಾದ ತಮಿಳು ಉಗ್ರರ ಸಂಚಿನಿಂದಾಗಿ ತಮಿಳುನಾಡಿನಲ್ಲಿ ರಾಜೀವ್ ಗಾಂಧಿ ಅವರು ಕೊಲ್ಲಲ್ಪಟ್ಟರು. ಬಳಿಕ ವಿ. ಪಿ. ಸಿಂಗ್ ನೇತೃತ್ವದ ಕೇಂದ್ರ ಸರ್ಕಾರವು ಮೇ 21 ಅನ್ನು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ದಿನದಂದು ಎಲ್ಲಾ ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ಭಯೋತ್ಪಾದನಾ ವಿರೋಧಿ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಗುತ್ತದೆ.
ಈ ದಿನದ ಹಿಂದಿನ ಇತಿಹಾಸ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ತಮಿಳುನಾಡಿನ ಶ್ರೀಪೆರಂಬದೂರ್‌ಗೆ ರ‍್ಯಾಲಿಯಲ್ಲಿ ಭಾಗವಹಿಸಲು ತೆರಳಿದ್ದರು. ಲಿಬರೇಶನ್ ಆಫ್ ತಮಿಳು ಟೈಗರ್ಸ್ ಈಳಂ (ಎಲ್‌ಟಿಟಿಇ) ಭಯೋತ್ಪಾದಕ ಗುಂಪಿನ ಸದಸ್ಯಳಾಗಿದ್ದ ಮಹಿಳೆಯೊಬ್ಬಳು ರಾಜೀವ್ ಗಾಂಧಿ ಮುಂದೆ ಅಭಿಮಾನದ ನಾಟಕ ಆಡಿದಳು. ಆಕೆ ತನ್ನ ಬಟ್ಟೆಯ ಒಳಗೆ ಸ್ಫೋಟಕಗಳನ್ನು ಇರಿಸಿಕೊಂಡಿದ್ದಳು. ರಾಜೀವ್ ಬಳಿಗೆ ಬಂದು ಅವರ ಪಾದಗಳನ್ನು ಸ್ಪರ್ಶಿಸಬೇಕೆಂದು ಬಾಗಿದಳು. ಇದ್ದಕ್ಕಿದ್ದಂತೆ ಬಾಂಬ್ ಸ್ಫೋಟ ಸಂಭವಿಸಿ ರಾಜೀವ್ ಸೇರಿದಂತೆ ಸುಮಾರು 25 ಮಂದಿ ಸಾವನ್ನಪ್ಪಿದರು.
ಹೇಗೆ ಆಚರಣೆ?
ಭಯೋತ್ಪಾದನೆ ಮತ್ತು ಹಿಂಸಾಚಾರದ ಅಪಾಯಗಳ ಕುರಿತು ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಚರ್ಚೆಗಳನ್ನು ಆಯೋಜಿಸಲಾಗುತ್ತದೆ. ಭಯೋತ್ಪಾದನೆಯ ದುಷ್ಪರಿಣಾಮಗಳು ಮತ್ತು ಅದರ ಅನಂತರದ ಪರಿಣಾಮಗಳನ್ನು ಎತ್ತಿ ತೋರಿಸಲು ಸಾಮೂಹಿಕ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಭಯೋತ್ಪಾದನೆಯ ಪರಿಣಾಮಗಳನ್ನು ಜನರಿಗೆ ತಿಳಿಸಲು ರ‍್ಯಾಲಿ ಮತ್ತು ಮೆರವಣಿಗೆಗಳನ್ನು ಆಯೋಜಿಸುತ್ತದೆ. ರಾಜೀವ್ ಗಾಂಧಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.
ಇದನ್ನೂ ಓದಿ: ಇಸ್ರೇಲ್ ಪಿಎಂ ಬೆಂಜಮಿನ್ ನೆತನ್ಯಾಹು, ಹಮಾಸ್ ಉಗ್ರರಿಗೆ ಜಾಗತಿಕ ಕೋರ್ಟ್ ಅರೆಸ್ಟ್ ವಾರೆಂಟ್! ಶೀಘ್ರ ಬಂಧನ?
ಆಚರಣೆಯ ಮಹತ್ವ
ಭೀಕರ ಭಯೋತ್ಪಾದಕ ದಾಳಿಯ ಹಿನ್ನೋಟ ಗಮನಿಸಿದರೆ ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಮೇಲಿನ ದಾಳಿಯನ್ನು ನಾವು ಮರೆಯಲು ಸಾಧ್ಯವಿಲ್ಲ. ಅದೇ ರೀತಿ ಮುಂಬಯಿ ಮೇಲಿನ ಪಾಕಿಸ್ತಾನ ಪ್ರೇರಿತ 26/11 ದಾಳಿ ಕೂಡ ಇದಕ್ಕಿಂತ ಹೊರತಾಗಿಲ್ಲ. ಇಂಥ ಭಯೋತ್ಪಾದನೆಯನ್ನು ವಿರೋಧಿಸಲು ಮತ್ತು ಮಾನವೀಯತೆಯೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ಭಯೋತ್ಪಾದನಾ ವಿರೋಧಿ ದಿನವು ಮಹತ್ವದ ಸಂದೇಶ ಸಾರುತ್ತದೆ. ಭಯೋತ್ಪಾದನೆಯು ಮನುಷ್ಯರ ಹಕ್ಕುಗಳ ಮೇಲಿನ ದಾಳಿ ಎಂಬುದರಲ್ಲಿ ಸಂದೇಹವಿಲ್ಲ. ಆದ್ದರಿಂದ ನಾವೆಲ್ಲ ಒಗ್ಗೂಡಿ ಪರಸ್ಪರ ಪ್ರೀತಿ, ಕಾಳಜಿ ತೋರುವ ಮೂಲಕ ಭಯೋತ್ಪಾದನೆ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕಲು ಪ್ರಯತ್ನಿಸಬೇಕಿದೆ.
ಭಯೋತ್ಪಾದಕರಿಗೆ ಧರ್ಮವಿಲ್ಲ. ಅವರಿಗೆ ವಿನಾಶದ ಭಾಷೆ ಮಾತ್ರ ಅರ್ಥವಾಗುತ್ತದೆ. ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನವು ಭಾರತದಲ್ಲಿ ಒಂದು ಪ್ರಮುಖ ದಿನವಾಗಿದೆ. ಏಕೆಂದರೆ ಇದು ಜನರು ತಮ್ಮ ದೈನಂದಿನ ಜೀವನದಲ್ಲಿ ಜಾಗರೂಕರಾಗಿರಲು ಪ್ರೇರೇಪಿಸುತ್ತದೆ. ಜನರು ತಮ್ಮ ಭಿನ್ನಾಭಿಪ್ರಾಯಗಳನ್ನು ತೊರೆದು ಸಾಮರಸ್ಯದಿಂದ ಸಹಬಾಳ್ವೆ ನಡೆಸಲು ಪ್ರೋತ್ಸಾಹಿಸುವ ಮೂಲಕ ಇದು ಶಾಂತಿಯನ್ನು ಉತ್ತೇಜಿಸುತ್ತದೆ. ಸಮಾಜವನ್ನು ಶಾಂತಿಯುತವಾಗಿ ಇಡುವುದು ಎಷ್ಟು ಮುಖ್ಯ ಎಂಬ ಅರಿವು ಮೂಡಿಸುತ್ತದೆ. ಭಯೋತ್ಪಾದನೆಯ ವಿರುದ್ಧ ನಾವೆಲ್ಲರೂ ಕೈಜೋಡಿಸೋಣ.