Site icon Vistara News

Anurag Thakur: ತಮ್ಮ ಜಾತಿಯೇ ಗೊತ್ತಿರದ ರಾಹುಲ್‌ ಗಾಂಧಿಯಿಂದ ಜಾತಿಗಣತಿ ಪ್ರಸ್ತಾಪ ಎಂದ ಅನುರಾಗ್‌ ಠಾಕೂರ್‌!

Anurag Thakur

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ದೇಶಾದ್ಯಂತ ಜಾತಿಗಣತಿ ಮಾಡಬೇಕು ಎಂದು ಆಗ್ರಹಿಸುತ್ತಲೇ ಇದ್ದಾರೆ. ಹಾಗೆಯೇ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾತಿಗಣತಿ ಮಾಡುತ್ತದೆ ಎಂದು ಕೂಡ ಹೇಳುತ್ತಾರೆ. ಇನ್ನು, ಸೋಮವಾರ (ಜುಲೈ 29) ಸಂಸತ್‌ನಲ್ಲಿ ಜಾತಿಗಣತಿ (Caste Census) ಕುರಿತು ರಾಹುಲ್‌ ಗಾಂಧಿ ಪ್ರಸ್ತಾಪಿಸಿದ್ದು, ಲೋಕಸಭೆಯಲ್ಲಿ ನಾವು ಜಾತಿಗಣತಿ ಮಂಡಿಸುತ್ತೇವೆ ಎಂದಿದ್ದರು. ಇದಕ್ಕೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ (Anurag Thakur) ತಿರುಗೇಟು ನೀಡಿದ್ದು, “ತಮ್ಮ ಜಾತಿಯೇ ಯಾವುದೆಂದು ಗೊತ್ತಿರದವರು ಜಾತಿಗಣತಿ ಬಗ್ಗೆ ಮಾತನಾಡುತ್ತಿದ್ದಾರೆ” ಎಂಬುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂಸತ್‌ನಲಿ ಮಾತನಾಡಿದ ಅನುರಾಗ್‌ ಠಾಕೂರ್‌, “ದೇಶದಲ್ಲಿ ಜಾತಿಗಣತಿ ಬಗ್ಗೆ ತುಂಬ ಮಾತನಾಡುತ್ತಾರೆ. ಜಾತಿಗಣತಿಯನ್ನು ಲೋಕಸಭೆಯಲ್ಲಿ ಮಂಡಿಸುತ್ತೇವೆ ಎನ್ನುತ್ತಾರೆ. ಆದರೆ, ಜಾತಿಗಣತಿ ಬಗ್ಗೆ ಮಾತನಾಡುವವರಿಗೇ ತಮ್ಮ ಜಾತಿ ಯಾವುದು ಎಂದು ಗೊತ್ತಿಲ್ಲ” ಎಂಬುದಾಗಿ ಅನುರಾಗ್‌ ಠಾಕೂರ್‌ ಟೀಕಿಸಿದರು. ಇದಕ್ಕೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರು ತಿರುಗೇಟು ನೀಡಿದರು. “ಬೇರೆಯವರ ಜಾತಿಯನ್ನು ಕೇಳುವುದು ಎಷ್ಟು ಸರಿ” ಎಂದು ತಿರುಗೇಟು ನೀಡಿದರು.

ರಾಹುಲ್‌ ಗಾಂಧಿ ಪ್ರತ್ಯುತ್ತರ

ಅನುರಾಗ್‌ ಠಾಕೂರ್‌ ಹೇಳಿಕೆಗೆ ರಾಹುಲ್‌ ಗಾಂಧಿ ಪ್ರತ್ಯುತ್ತರ ನೀಡಿದರು. “ನೀವು ನನ್ನನ್ನು ಎಷ್ಟು ಅವಮಾನಿಸುತ್ತೀರೋ ಅವಮಾನಿಸಿ. ಆದರೆ, ನಾವು ಸಂಸತ್‌ನಲ್ಲಿ ಜಾತಿಗಣತಿ ವಿಧೇಯಕ ಮಂಡಿಸುತ್ತೇವೆ ಎಂಬುದನ್ನು ನೀವು ಮರೆಯದಿರಿ” ಎಂದರು. “ಅನುರಾಗ್‌ ಠಾಕೂರ್‌ ಅವರು ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನನ್ನನ್ನು ಅವಮಾನಿಸಿದ್ದಾರೆ. ಆದರೆ, ನಾನು ಅವರು ಕ್ಷಮೆ ಕೇಳಿ ಎಂಬುದಾಗಿ ಆಗ್ರಹಿಸುವುದಿಲ್ಲ. ಎಷ್ಟು ಬೇಕಾದರೂ ಅವಮಾನ ಮಾಡಲಿ” ಎಂದರು.

ಸಂಸತ್‌ನಲ್ಲಿ ಸೋಮವಾರ (ಜುಲೈ 29) ರಾಹುಲ್‌ ಗಾಂಧಿ ಅವರು ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು. ದೇಶದ ಜನರ ಸುತ್ತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೆಣೆದ ಚಕ್ರವ್ಯೂಹವನ್ನು ನಾವು ಭೇದಿಸುತ್ತೇವೆ. ಚಕ್ರವ್ಯೂಹವನ್ನು ನಮಗೆ ಭೇದಿಸುವುದು ಗೊತ್ತಿದೆ. ಯಾವ ಜಾತಿಗಣತಿ ಎಂದರೆ ನೀವು (ಬಿಜೆಪಿ) ಹೆದರುತ್ತೀರೋ, ಅದೇ ಜಾತಿಗಣತಿಯನ್ನು ಇದೇ ಸದನದಲ್ಲಿ ನಾವು ಮಂಡಿಸುತ್ತೇವೆ. ನಿಮಗೆ ಇಷ್ಟ ಇದೆಯೋ ಇಲ್ಲವೋ, ನಾವು ಇದೇ ಸದನದಲ್ಲಿ ಜಾತಿಗಣತಿಯನ್ನು ಮಂಡಿಸುತ್ತೇವೆ. ದೇಶದ ಜನ ಅರ್ಜುನನ ರೀತಿ ಚಕ್ರವ್ಯೂಹವನ್ನು ಭೇದಿಸಲಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದರು.

ಇದನ್ನೂ ಓದಿ: Rahul Gandhi: ಮೋದಿ ಸೇರಿ 6 ಜನರಿಂದ ಭಾರತೀಯರಿಗೆ ಚಕ್ರವ್ಯೂಹ ರಚನೆ ಎಂದ ರಾಹುಲ್‌ ಗಾಂಧಿ; 6 ಜನ ಯಾರ‍್ಯಾರು?

Exit mobile version