Site icon Vistara News

Hacking Alert: ಕೇಂದ್ರ ಸರ್ಕಾರದಿಂದ ಸಂಸದರ ಫೋನ್‌ ಹ್ಯಾಕ್‌? ಏನಿದು ಕೇಸ್?

Hacking Alert

Apple Advisory In 150 Nations: Centre On Opposition's Hacking Alert Message

ನವದೆಹಲಿ: ಕೇಂದ್ರ ಸರ್ಕಾರವು ಪೆಗಾಸಸ್‌ ಸಾಫ್ಟ್‌ವೇರ್‌ ಬಳಸಿ ಪ್ರತಿಪಕ್ಷ ನಾಯಕರ ಮೊಬೈಲ್‌ಗಳನ್ನು ಕದ್ದಾಲಿಸಿದೆ ಎಂಬ ಆರೋಪದ ಬೆನ್ನಲ್ಲೇ ಪ್ರತಿಪಕ್ಷಗಳ ಸಂಸದರಿಂದ ಮತ್ತೊಂದು ಆರೋಪ ಕೇಳಿಬಂದಿದೆ. ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ಸಂಸದ ಐ ಫೋನ್‌ಗಳನ್ನು (iPhones) ಹ್ಯಾಕ್‌ (Hacking Alert) ಮಾಡುತ್ತಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿ ಹಲವು ಸಂಸದರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ, ಪ್ರತಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರವು, ಪ್ರಕರಣವನ್ನು ತನಿಖೆಗೆ ಆದೇಶಿಸಿದೆ.

“ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು ನಿಮ್ಮ ಐಫೋನ್‌ಗಳನ್ನು ಹ್ಯಾಕ್‌ ಮಾಡಲು ಯತ್ನಿಸುತ್ತಿದ್ದಾರೆ. ನಿಮ್ಮ ಆ್ಯಪಲ್‌ ಐಡಿಯನ್ನು ಬಳಸಿಕೊಂಡು ದೂರದಲ್ಲಿದ್ದುಕೊಂಡು ನಿಮ್ಮ ಫೋನ್‌ಗಳನ್ನು ಟಾರ್ಗೆ ಮಾಡುತ್ತಿದ್ದಾರೆ. ನಿಮ್ಮ ಸೂಕ್ಷ್ಮ ಮಾಹಿತಿ, ಕ್ಯಾಮೆರಾ, ಕರೆ ಡಿಟೇಲ್ಸ್‌ ಸೇರಿ ಹಲವು ಮಾಹಿತಿಗೆ ಕನ್ನ ಹಾಕುವ ಸಾಧ್ಯತೆ” ಇದೆ ಎಂಬುದಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಆ್ಯಪಲ್‌ ಕಂಪನಿಯಿಂದ ಅಲರ್ಟ್‌ ಮೆಸೇಜ್‌ ಬಂದಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಹಾಗೆಯೇ, ಕೇಂದ್ರ ಸರ್ಕಾರದ ವಿರುದ್ಧ ಮಹುವಾ ಮೊಯಿತ್ರಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ಸಂಸದೆಗೂ ಮೆಸೇಜ್‌

ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರಿಗೂ ಐಫೋನ್‌ ಅಲರ್ಟ್‌ ಮೆಸೇಜ್‌ ಬಂದಿದೆ. “ನನಗೆ ಮಾತ್ರವಲ್ಲ ಸಂಸದೆ ಮಹುವಾ ಮೊಯಿತ್ರಾ ಅವರಿಗೂ ಇಂತಹ ಮೆಸೇಜ್‌ ಬಂದಿದೆ. ಕೇಂದ್ರ ಗೃಹ ಸಚಿವಾಲಯವು ಈ ಕುರಿತು ತನಿಖೆ ಮಾಡಬಹುದೇ” ಎಂದು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕರಾದ ಪವನ್‌ ಖೇರಾ, ಶಶಿ ತರೂರ್‌ ಅವರಿಗೂ ಇಂತಹ ಮೆಸೇಜ್‌ಗಳು ಬಂದಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: Actor Prabhas: ಪ್ರಭಾಸ್‌ ಇನ್‌ಸ್ಟಾಗ್ರಾಮ್‌ ಇದ್ದಕ್ಕಿಂದ್ದಂತೆ ಮಾಯ; ಹ್ಯಾಕ್‌ ಆಯ್ತಾ? ಡಿಲಿಟ್‌ ಮಾಡಿದ್ರಾ?

ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

ಪ್ರತಿಪಕ್ಷಗಳ ಆರೋಪವನ್ನು ನಿರಾಕರಿಸಿರುವ ಕೇಂದ್ರ ಸರ್ಕಾರವು, ಪ್ರಕರಣವನ್ನು ತನಿಖೆಗೆ ಆದೇಶಿಸಿದೆ. “ಆ್ಯಪಲ್‌ ಕಂಪನಿಯು 150 ದೇಶಗಳ ಜನರಿಗೆ ಇಂತಹ ಅಲರ್ಟ್‌ ಮೆಸೇಜ್‌ ಕಳುಹಿಸಿದೆ. ಇವುಗಳಲ್ಲಿ ಕೆಲವು ಮೆಸೇಜ್‌ಗಳು ತಪ್ಪಾಗಿ ಬಂದಿವೆ. ಆದರೂ, ಪ್ರಕರಣದ ಕುರಿತು ಕೇಂದ್ರ ಸರ್ಕಾರವು ತನಿಖೆಗೆ ಆದೇಶಿಸಿದೆ. ಐಫೋನ್‌ ಕಂಪನಿ ಕೂಡ ತನಿಖೆಗೆ ಸಹಕರಿಸಬೇಕು” ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರು ಸ್ಪಷ್ಟಪಡಿಸಿದ್ದಾರೆ. ದೇಶದ ಜನರ ಖಾಸಗಿತನವನ್ನು ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದೂ ಹೇಳಿದ್ದಾರೆ.

ಆ್ಯಪಲ್‌ ಕಂಪನಿ ಹೇಳುವುದೇನು?

ಆ್ಯಪಲ್‌ ಕಂಪನಿ ಕೂಡ ಹ್ಯಾಕಿಂಗ್‌ ಅಲರ್ಟ್‌ ಮಸೇಜ್‌ ರವಾನೆಯಾಗಿರುವುದನ್ನು ದೃಢಪಡಿಸಿವೆ. ಆದರೆ, ಯಾವ ದೇಶದ ಸರ್ಕಾರವು ಹೀಗೆ ಪ್ರತಿಪಕ್ಷಗಳ ನಾಯಕರ ಐ ಫೋನ್‌ಗಳನ್ನು ಹ್ಯಾಕ್‌ ಮಾಡಲು ಯತ್ನಿಸುತ್ತಿದೆ ಎಂಬುದರ ಕುರಿತು ನಿಖರ ಮಾಹಿತಿ ದೊರೆತಿಲ್ಲ. ಹಾಗೆಯೇ, ಕೆಲವು ನೋಟಿಫಿಕೇಶನ್‌ಗಳು ತಪ್ಪಾಗಿವೆ ಎಂದು ಕೂಡ ಪ್ರತಿಕ್ರಿಯಿಸಿದೆ.

Exit mobile version