ನವ ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರ ತಮ್ಮ 94ನೇ ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ, (Mann ki baat) ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೊದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೂರ್ಯೋಪಾಸನೆಯನ್ನು ಆಧರಿಸಿದ ಛಠ್ ಪೂಜಾದ ಪ್ರಯುಕ್ತ ಶುಭಾಶಯಗಳನ್ನು ಕೋರಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಹಬ್ಬ ಹರಿದಿನಗಳಿಗೂ ಪ್ರಕೃತಿಯ ಸಂರಕ್ಷಣೆಗೂ ಇರುವ ಸಂಬಂಧವನ್ನು ತಿಳಿಸಿದರು.
ಸೂರ್ಯೋಪಾಸನೆಯ ಮಹತ್ವವನ್ನು ಎಲ್ಲರೂ ಮನಗಾಣಬೇಕು. ಗುಜರಾತ್‌ನ ಮೊಢೇರಾದಲ್ಲಿ ಸಂಪೂರ್ಣ ಸೌರ ಶಕ್ತಿ ಬಳಕೆಯಾಗುತ್ತಿದ್ದು, ಈ ಸೂರ್ಯಗ್ರಾಮದ ಮಾದರಿಯನ್ನು ಇತರ ರಾಜ್ಯಗಳಲ್ಲೂ ಅಳವಡಿಸಿಕೊಳ್ಳಬಹುದು ಎಂದು ಹೇಳಿದರು.
ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ನೆರವಿನಿಂದಾಗಿ ಭಾರತ ಈಗ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ದೇಶಗಳಲ್ಲಿ ಒಂದಾಗಿದೆ. ದೇಶದಲ್ಲಿ ಮೊಢೇರಾ ಮಾರಿಯಲ್ಲಿ ಸೂರ್ಯ ಗ್ರಾಮಗಳ ಬಹು ದೊಡ್ಡ ಆಂದೋಲನ ನಡೆಯುವ ದಿನಗಳು ದೂರವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇಸ್ರೊದ ಸಾಧನೆಯ ಮಹತ್ವ ಬಣ್ಣಿಸಿದ ಪ್ರಧಾನಿ: ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದಿದ ಇತರ ದೇಶಗಳು ಭಾರತಕ್ಕೆ ಕ್ರಯೋಜೆನಿಕ್ ತಂತ್ರಜ್ಞಾನವನ್ನು ನೀಡಲು ನಿರಾಕರಿಸುತ್ತಿದ್ದವು. ಆದರೆ ಭಾಎತ ತನ್ನದೇ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿತು. ಈಗ ಡಜನುಗಟ್ಟಲೆ ಉಪಗ್ರಹಗಳನ್ನು ಉಡಾವಣೆಗೊಳಿಸುವ ಸಾಮರ್ಥ್ಯ ಗಳಿಸಿದ್ದೇವೆ. ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತ ಪ್ರಬಲವಾಗಿ ಮುಂದುವರಿದಿದೆ. ಈ ನಿಟ್ಟಿನಲ್ಲಿ ಇಸ್ರೊ ಸಾಧನೆ ದೊಡ್ಡದು. ಈಗ ಖಾಸಗಿ ವಲಯವನ್ನೂ ಬಾಹ್ಯಾಕಾಶ ವಲಯಕ್ಕೆ ಮುಕ್ತವಾಗಿ ಸ್ವಾಗತಿಸಲಾಗಿದೆ ಎಂದು ವಿವರಿಸಿದರು.