ಹೈದರಾಬಾದ್: ಕೋವಿಡ್-೧೯ ಬಿಕ್ಕಟ್ಟು ನಿರ್ವಹಣೆಯಲ್ಲಿ ಮೋದಿ ಸರ್ಕಾರದ ಮಾದರಿ, ಅಗ್ನಿಪಥ, ಗತಿ ಶಕ್ತಿ ಮೊದಲಾದ ಮಹತ್ತ್ವಾಕಾಂಕ್ಷೆಯ ಯೋಜನೆಗಳಿಗೆ ಮೆಚ್ಚುಗೆಯನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣೆ ಸಭೆ ವ್ಯಕ್ತಪಡಿಸಿದೆ.
ಶತಮಾನಕ್ಕೊಮ್ಮೆ ಸಂಭವಿಸುವಂಥ ಕೋವಿಡ್-೧೯ ಬಿಕ್ಕಟ್ಟಿನ ಸಂದರ್ಭ ಬಡವರ ಹಿತಾಸಕ್ತಿಗೆ ಮೋದಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಆರೋಗ್ಯ ಮತ್ತು ಆರ್ಥಿಕತೆಯನ್ನು ಸಂರಕ್ಷಿಸಲು ಹಗಲಿರುಳೆನ್ನದೆ ಶ್ರಮಿಸಿತ್ತು ಎಂದು ಪಕ್ಷದ ಕಾರ್ಯಕಾರಿಣಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಅಗ್ನಿಪಥ, ಗತಿಶಕ್ತಿಯಿಂದ ಉದ್ಯೋಗ
ಅಗ್ನಿಪಥ ಮತ್ತು ಗತಿಶಕ್ತಿ ಯೋಜನೆಯಿಂದ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕಾರ್ಯಕಾರಿಣಿ ಅಭಿಪ್ರಾಯಪಟ್ಟಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಕೋವಿಡ್ ಸಂದರ್ಭ ಇಡೀ ಜಗತ್ತು ಕಂಗಾಲಾಗಿತ್ತು. ಆಗ ಭಾರತ ತನ್ನ ಆರೈಕೆಯನ್ನು ತಾನೇ ನಿರ್ವಹಿಸಿತ್ತು. ಒಂದೂವರೆ ವರ್ಷದೊಳಗೆ ಭಾರತದ ಅರ್ಧದಷ್ಟು ಜನಸಂಖ್ಯೆಗೆ ಕೋವಿಡ್ ಲಸಿಕೆ ವಿತರಣೆಯಾಗಿತ್ತು. ನಾವು ಪೊಲಿಯೊ ಲಸಿಕೆ ಪಡೆಯಲು ೩೦ ವರ್ಷ ತೆಗೆದುಕೊಂಡಿದ್ದೆವು ಎಂಬುದನ್ನು ಮರೆಯುವಂತಿಲ್ಲ. ಕೋವಿಡ್ ಬಿಕ್ಕಟ್ಟಿನ ವೇಳೆ ೮೦ ಕೋಟಿ ಮಂದಿಗೆ ಉಚಿತವಾಗಿ ಪಡಿತರ ವಿತರಿಸಲಾಯಿತು. ಇದು ಸಾಮಾನ್ಯ ಸಂಗತಿಯಲ್ಲ ಎಂದು ಪ್ರಧಾನ್ ವಿವರಿಸಿದರು.
ಇಂದು ಪ್ರಧಾನಿ ಮೋದಿ ಭಾಷಣ
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಉದ್ದೇಶಿಸಿ ಇಂದು ಭಾಷಣ ಮಾಡಲಿದ್ದಾರೆ. ಪಕ್ಷ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಿದೆ. ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮೋದಿಯವರು ಕಾರ್ಯಕರ್ತರಿಗೆ ಸಲಹೆ ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಪಕ್ಷದ ರಾಜಕೀಯ ನಿರ್ಣವನ್ನು ಇಂದು ಕೈಗೊಳ್ಳುವ ನಿರೀಕ್ಷೆ ಇದೆ. ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ಎರಡನೇ ದಿನ ಫೋಕಸ್ ನೀಡುವ ನಿರೀಕ್ಷೆ ಇದೆ.
ಪಕ್ಷದ ರಾಜಕೀಯ ನಿರ್ಣಯದ ಬಗ್ಗೆ ಅಸ್ಸಾಂ ಸಿಎಂ ಹಿಮಂತಾ ಬಿಸ್ವಾ ಶರ್ಮಾ ಮತ್ತು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡುವ ನಿರೀಕ್ಷೆ ಇದೆ. ಉತ್ತರಪ್ರದೇಶ, ಗೋವಾ, ಉತ್ತರಾಖಂಡ್, ಮಣಿಪುರದಲ್ಲಿ ಪಕ್ಷದ ಇತ್ತೀಚಿನ ಚುನಾವಣಾ ಯಶಸ್ಸಿನ ಬಗ್ಗೆಯೂ ಚರ್ಚೆ ನಿರೀಕ್ಷಿಸಲಾಗಿದೆ.
ಬೃಹತ್ ಬಹಿರಂಗ ಸಮಾವೇಶ
ಬಿಜೆಪಿಯ ಕಾರ್ಯಕಾರಿಣಿಯ ಬಳಿಕ ಸಿಕಂದರಾಬಾದ್‌ನ ಪರೇಡ್ ಮೈದಾನದಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.