Site icon Vistara News

45 ಲಕ್ಷ ಕೋಟಿ ರೂ. ವೆಚ್ಚಕ್ಕೆ ಅವಕಾಶ ಕಲ್ಪಿಸುವ ಧನ ವಿನಿಯೋಗ ವಿಧೇಯಕಕ್ಕೆ 9 ನಿಮಿಷದಲ್ಲಿ ಲೋಕಸಭೆ ಒಪ್ಪಿಗೆ!

Appropriation Bill passed without discussion within 9 minutes

ನವದೆಹಲಿ: ಯಾವುದೇ ಚರ್ಚೆ ಇಲ್ಲದೇ ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 45 ಲಕ್ಷ ಕೋಟಿ ರೂ. ವೆಚ್ಚ ಮಾಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ಕಲ್ಪಿಸುವ ಧನ ವಿನಿಯೋಗ ವಿಧೇಯಕಕ್ಕೆ (Appropriation Bill) ಲೋಕಸಭೆ ಕೇವಲ 9 ನಿಮಿಷದಲ್ಲೇ ತನ್ನ ಒಪ್ಪಿಗೆಯನ್ನು ಗುರುವಾರ ನೀಡಿದೆ.

ಗುರುವಾರ ಕಲಾಪ ಆರಂಭವಾಗುತ್ತಿದ್ದಂತೆ ಗದ್ದಲ ಶುರುವಾಯಿತು. ಇದರ ಮಧ್ಯೆಯೇ ವಿಧೇಯಕವನ್ನು ಮಂಡಿಸಿ ಒಪ್ಪಿಗೆಯನ್ನು ಪಡೆದುಕೊಳ್ಳಲಾಯಿತು. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರ ಸಚಿವರು ಇದ್ದರು. ಈ ವೇಳೆ, ಪ್ರತಿಪಕ್ಷಗಳು ಗೌತಮ್ ಅದಾನಿ ಗ್ರೂಪ್ ಕಂಪನಿಗಳ ಷೇರು ವ್ಯವಹಾರ ಕುರಿತು ಜಂಟಿ ಸಂಸದೀಯ ಸಮಿತಿಗೆ ಒತ್ತಾಯಿಸಿದರು. ಅಲ್ಲದೇ, ಪ್ರತಿಪಕ್ಷಗಳ ಸದಸ್ಯರು ಮೋದಿ-ಅದಾನಿ ಭಾಯಿ ಭಾಯಿ ಎಂದು ಘೋಷಣೆಗಳನ್ನು ಕೂಗಿದರು.

ಗುರುವಾರ ಸಾಯಂಕಾಲ ಸ್ಪೀಕರ್ ಓಂ ಬಿರ್ಲಾ ಅವರು, ಅನೇಕ ಸದಸ್ಯರು ಮಂಡಿಸದ ಅನುದಾನ ಬೇಡಿಕೆ ಸಹಿತ ಇತರ ತಡೆ ಗೊತ್ತುವಳಿಗಳನ್ನು ಒಟ್ಟಿಗೆ ಮತಕ್ಕೆ ಹಾಕಿದರು. ಅನುದಾನ ಬೇಡಿಕೆ ಸಂಬಂಧ ಅನೇಕ ತಡೆ ಗೊತ್ತುವಳಿಗಳನ್ನು ಸ್ವೀಕರಿಸಲಾಗಿದೆ. ಸಮಯದ ಕೊರತೆಯಿಂದಾಗಿ ಎಲ್ಲ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಬಿರ್ಲಾ ಅವರು ಹೇಳಿದರು.

ಧನ ವಿನಿಯೋಗ ವಿಧೇಯಕವನ್ನು ಅಂಗೀಕರಿಸಲು ಸದನವು ಸಭೆ ಸೇರುವ ಮೊದಲು ಗುರುವಾರದ ಪೂರಕ ಪಟ್ಟಿಗೆ ಸೇರಿಸಲಾದ ಹಣಕಾಸು ಮಸೂದೆಯ ಸಂಭವನೀಯ ಪರಿಚಯ ಮತ್ತು ಅಂಗೀಕಾರದ ಬಗ್ಗೆ ಪ್ರತಿಪಕ್ಷಗಳ ನಾಯಕರು ವಿರೋಧಿಸಿದರು. ಪೂರಕ ಪ್ರಶ್ನೆ ಕೇಳಲು ಯತ್ನಿಸಿದ ಆರ್‌ಎಸ್‌ಪಿಯ ಎನ್‌ ಕೆ ಪ್ರೇಮಚಂದ್ರನ್‌ಗೆ ಶುಕ್ರವಾರ ಹಣಕಾಸು ವಿಧೇಯಕವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬಿರ್ಲಾ ಇದೇ ವೇಳೆ ಭರವಸೆ ನೀಡಿದರು.

ಇದನ್ನೂ ಓದಿ: Rahul Gandhi: ಲೋಕಸಭೆಯಿಂದ ರಾಹುಲ್‌ ಗಾಂಧಿ ಅನರ್ಹ ನಿಶ್ಚಿತ? ಏನು ಹೇಳುತ್ತದೆ ಕಾನೂನು?

ಇದೇ ವೇಳೆ, ಅದಾನಿ ಕುರಿತು ತನಿಖೆಗೆ ಆಗ್ರಹಿಸಿ ಜೆಪಿಸಿ ರಚಿಸಬೇಕೆಂದು ಒತ್ತಾಯಿಸಿ ಪ್ರತಿಪಕ್ಷದ ಸದಸ್ಯರ ಸದನದ ಪೀಠಕ್ಕೆ ನುಗ್ಗಿದರು. ಅಲ್ಲದೇ, ಯಾವುದೇ ಚರ್ಚೆ ಇಲ್ಲದೇ ಧನ ವಿನಿಯೋಗ ವಿಧೇಯಕವನ್ನು ಯಾವುದೇ ಚರ್ಚೆ ಇಲ್ಲದೇ ಧ್ವನಿ ಮತದ ಆಧಾರದ ಮೇಲೆ ಪಾಸು ಮಾಡಿದ್ದನ್ನು ಆಕ್ಷೇಪಿಸಿದರು. ಬಜೆಟ್ ದಾಖಲೆಗಳ ಪತ್ರಗಳ ಪ್ರಕಾರ, 2023-24ನೇ ಹಣಕಾಸು ವರ್ಷದಲ್ಲಿ ಅಂದಾಜು ವೆಚ್ಚದ ಮೊತ್ತ 45 ಲಕ್ಷ ಕೋಟಿ ರೂ. ಈ ಪೈಕಿ ಬಂಡವಾಳ ವೆಚ್ಚವೇ ಸುಮಾರು 10 ಲಕ್ಷ ಕೋಟಿ ರೂ. ಎಂದು ನಿಗದಿ ಪಡಿಸಲಾಗಿದೆ.

Exit mobile version