ನವ ದೆಹಲಿ: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರು ಕೇರಳದಲ್ಲಿ ಮಸೀದಿಯೊಂದರಲ್ಲಿ ನಡೆದ ವಿವಾಹವೊಂದರ ವಿಡಿಯೊವನ್ನು ಗುರುವಾರ ಟ್ವೀಟ್ ಮಾಡಿದ್ದಾರೆ. ಮಾನವೀಯತೆಯ ಮೇಲಿನ ಪ್ರೀತಿ ಭೇಷರತ್ತಾಗಿರಬೇಕು ಮತ್ತು ಸೌಹಾರ್ದಯುತವಾಗಿರಬೇಕು ( The Kerala Story) ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಐಸಿಸ್ ಭಯೋತ್ಪಾದಕ ಸಂಘಟನೆಯ ಸುತ್ತಮುತ್ತ ಕಥೆಯನ್ನು ಒಳಗೊಂಡಿರುವ ದಿ ಕೇರಳ ಸ್ಟೋರಿ ಹಿಂದಿ ಸಿನಿಮಾ ಬಿಡುಗಡೆಗೆ ಮುನ್ನವೇ ವಿವಾದ ಸೃಷ್ಟಿಸಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಕಾಂಗ್ರೆಸ್, ಸಿಪಿಐ(ಎಂ) ಒತ್ತಾಯಿಸಿವೆ. ಬಿಜೆಪಿ, ಹಿಂದೂಪರ ಸಂಘಟನೆಗಳು ಸಿನಿಮಾ ಪರ ನಿಲುವು ತಾಳಿವೆ. ಈ ಪರ-ವಿರೋಧದ ನಡುವೆ ಎ.ಆರ್ ರೆಹಮಾನ್ ಅವರ ಟ್ವೀಟ್ ಗಮನ ಸೆಳೆದಿದೆ. ಮೇ 5ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ :ವಿಸ್ತಾರ ಸಂಪಾದಕೀಯ: ‘ದಿ ಕೇರಳ ಸ್ಟೋರಿ’ ನಿಷೇಧದ ಮಾತೇಕೆ?
ಕೇರಳದ ಹಿಂದು ಮತ್ತು ಕ್ರಿಶ್ಚಿಯನ್ ಯುವತಿಯರನ್ನು ಬ್ರೇನ್ವಾಶ್ ಮಾಡಿ, ಇಲ್ಲಿಂದ ಸಿರಿಯಾ ಮತ್ತು ಅಫ್ಘಾನಿಸ್ತಾನದಂಥ ದೇಶಗಳಿಗೆ ಕರೆದುಕೊಂಡು ಹೋಗಿ, ಇಸ್ಲಾಮ್ಗೆ ಮತಾಂತರಗೊಳಿಸಿ, ಐಸಿಸ್ ಉಗ್ರಸಂಘಟನೆಗೆ ಸೇರಿಸುವ ಕತೆಯನ್ನು ಒಳಗೊಂಡಿರುವ ದಿ ಕೇರಳ ಸ್ಟೋರಿ ಬಗ್ಗೆ ಈಗಾಗಲೇ ಒಂದು ವರ್ಗದ ಜನರು ಕಟುವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ರಾಜಕೀಯವಾಗಿಯೂ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ. ಬಿಜೆಪಿ ಮತ್ತು ಇತರ ಹಿಂದು ಸಂಘಟನೆಗಳು ಸಿನಿಮಾವನ್ನು ಹೊಗಳಿವೆ. ಇದು ಕೇರಳದ ವಸ್ತುಸ್ಥಿತಿ ಎಂದು ಹೇಳಿವೆ. ಆದರೆ ಕಾಂಗ್ರೆಸ್, ಕೇರಳದ ಆಡಳಿತ ಪಕ್ಷ ಸಿಪಿಐ (ಎಂ) ಮತ್ತಿತರ ರಾಜಕೀಯ ಪಕ್ಷಗಳು ದಿ ಕೇರಳ ಸ್ಟೋರಿಗೆ ವಿರೋಧ ವ್ಯಕ್ತಪಡಿಸಿವೆ. ಮುಸ್ಲಿಮರನ್ನು ವಿಲನ್ಗಳಂತೆ ಬಿಂಬಿಸಲಾಗಿದೆ. ಕೋಮು ಸೌಹಾರ್ದತೆ ಕದಡುವ ಈ ಸಿನಿಮಾ ಯಾವ ಕಾರಣಕ್ಕೂ ಬಿಡುಗಡೆಯಾಗಬಾರದು ಎಂದು ಹೇಳಿದ್ದಾರೆ. ಸಿನಿಮಾ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಕೇರಳವು ಧಾರ್ಮಿಕ ಪ್ರತ್ಯೇಕತಾವಾದಿಗಳ ಕೇಂದ್ರ ಎಂದು ಬಿಂಬಿಸಿ, ರಾಜ್ಯದ ವಿರುದ್ಧ ಅಪಪ್ರಚಾರ ಮಾಡುವುದಕ್ಕೋಸ್ಕರ ಸಂಘ ಪರಿವಾರದವರೆಲ್ಲ ಸೇರಿ ಈ ದಿ ಕೇರಳ ಸ್ಟೋರಿ ಸಿನಿಮಾವನ್ನು ಬೆಂಬಲಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರೂ ಕೂಡ ಸಿನಿಮಾದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ‘ಇದು ನಿಮ್ಮ ಕೇರಳದ ಸ್ಟೋರಿಯಾಗಿರಬಹುದು. ನಮ್ಮ ಕೇರಳದಲ್ಲಿ ಇಂಥ ಕತೆಯಿಲ್ಲ ಎಂದಿದ್ದಾರೆ. ‘ನಾನು ಸಿನಿಮಾವನ್ನು ನಿಷೇಧಿಸುವಂತೆ ಹೇಳುತ್ತಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೋ ದುರುಪಯೋಗಪಡಿಸಿಕೊಂಡಾಕ್ಷಣ ಅದರ ಮೌಲ್ಯವೇನೂ ಕೆಡುವುದಿಲ್ಲ. ಆದರೆ ದಿ ಕೇರಳ ಸ್ಟೋರಿ ಎಂಬುದು ವಾಸ್ತವವನ್ನು ತಪ್ಪಾಗಿ ನಿರೂಪಿಸಿದ ಸಿನಿಮಾ ಎಂಬುದನ್ನು ಇಲ್ಲಿನ ಜನ ದೊಡ್ಡ ಧ್ವನಿಯಲ್ಲಿ, ಸ್ಪಷ್ಟವಾಗಿ ಹೇಳಬಹುದು. ಆ ಹಕ್ಕು ಅವರಿಗೆ ಇದೆ’ ಎಂದು ತರೂರ್ ಹೇಳಿದ್ದಾರೆ.