ಅಂಕಾರ: ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಶತಮಾನದ ಭೀಕರ ಭೂಕಂಪದಲ್ಲಿ (Turkey Earthquake) ಮೃತಪಟ್ಟವರ ಸಂಖ್ಯೆ ೨೫ ಸಾವಿರ ದಾಟಿದೆ. ಸಾವಿರಾರು ಜನ ಗಾಯಗೊಂಡಿದ್ದು, ನೂರಾರು ಜನ ಸಾವು-ಬದುಕಿನ ಮಧ್ಯೆ ಓಡಾಡುತ್ತಿದ್ದಾರೆ. ಸಾವಿರಾರು ಕಟ್ಟಡಗಳು ಕುಸಿದಿದ್ದು, ಅವಶೇಷಗಳಡಿಯಲ್ಲಿ ಸಿಲುಕಿದವರ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ. ಇದರ ಮಧ್ಯೆಯೇ, ಟರ್ಕಿಯಲ್ಲಿರುವ ಭಾರತೀಯರಿಗೂ ಯಾವ ಪ್ರಮಾಣದಲ್ಲಿ ತೊಂದರೆ ಆಗಿದೆ ಎಂಬ ಪ್ರಶ್ನೆ, ಆತಂಕ ಮೂಡಿದೆ. ಈ ಕುರಿತು ರಾಯಭಾರಿಗಳು ಮಾಹಿತಿ ನೀಡಿದ್ದಾರೆ.
“ಟರ್ಕಿಯಲ್ಲಿ ೩ ಸಾವಿರ ಭಾರತೀಯರಿದ್ದಾರೆ. ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಭಾರತೀಯರು ಇಲ್ಲ. ಹಾಗೆಯೇ, ಭೂಕಂಪದ ಬಳಿಕ ಒಂದಷ್ಟು ಜನ ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಹಾಗಾಗಿ, ಹೆಚ್ಚಿನ ಜನರಿಗೆ ತೊಂದರೆ ಆಗಿಲ್ಲ. ಆದಾಗ್ಯೂ, ಭೂಕಂಪದಿಂದ ತೊಂದರೆಗೆ ಭಾರತೀಯರ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ” ಎಂದು ಟರ್ಕಿಯಲ್ಲಿರುವ ಭಾರತದ ರಾಯಭಾರಿ ವೀರೇಂದರ್ ಪೌಲ್ ತಿಳಿಸಿದ್ದಾರೆ.
ಭಾರತೀಯರ ಜತೆ ನಿರಂತರ ಸಂಪರ್ಕ
“ಟರ್ಕಿಯಲ್ಲಿರುವ ಭಾರತೀಯರನ್ನು ಸಂಪರ್ಕಿಸಿ ಭೂಕಂಪದ ತೀವ್ರತೆ, ಅವರಿರುವ ಪ್ರದೇಶದ ಪರಿಸ್ಥಿತಿ ಸೇರಿ ವಿವಿಧ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರತಿಯೊಬ್ಬರಿಗೆ ಕರೆ ಮಾಡಿದಾಗಲೂ ಯಾವುದೇ ತೊಂದರೆ ಆಗದಿರುವ ಕುರಿತು ಮಾಹಿತಿ ನೀಡಿದ್ದಾರೆ. ದೇಶದ ಜನರ ರಕ್ಷಣೆಗೆ ಎಲ್ಲ ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾವುದೇ ರೀತಿಯ ನೆರವು ನೀಡಲು ಕೂಡ ಸಿದ್ಧ” ಎಂದು ವಿವರಿಸಿದರು.
ಇದನ್ನೂ ಓದಿ: ಟರ್ಕಿ ಭೂಕಂಪದ ಭೀಕರತೆ; ಎಲ್ಲೆಲ್ಲೂ ಶವಗಳು ಕೊಳೆತ ವಾಸನೆ, 94 ತಾಸು ತನ್ನ ಮೂತ್ರವನ್ನೇ ಕುಡಿದು ಬದುಕಿದ್ದ ಯುವಕ