ಬೆಂಗಳೂರು: ಹಿಂದಿ ಭಾಷಿಕರಿರುವ ಮೂರು ರಾಜ್ಯಗಳಲ್ಲಿ ಬಿಜೆಪಿಯ ಅಮೋಘ ವಿಜಯದ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ವಿಧಾನಸಭಾ ಚುನಾವಣೆಯ ಫಲಿತಾಂಶಗಳು “ದೇಶದ ಮನಸ್ಥಿತಿಯ” ಒಂದು ನೋಟ ಎಂದಿದ್ದಾರೆ. ಇದೇ ವೇಳೆ ಅವರು ದೇಶದ ಜನರು “ಸ್ಥಿರ, ಶಾಶ್ವತ ಮತ್ತು ಸಮರ್ಪಿತ ಸರ್ಕಾರ” ಕ್ಕಾಗಿ ಜನಾದೇಶವನ್ನು ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಸುದ್ದಿ ಪತ್ರಿಕೆ ದೈನಿಕ್ ಜಾಗರಣ್ಗೆ ನೀಡಿದ ಸಂದರ್ಶನದಲ್ಲಿ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳನ್ನು “ಲೋಕಸಭೆಗೆ ಸೆಮಿಫೈನಲ್” ಎಂದು ಪರಿಗಣಿಸಬಹುದೇ ಎಂದು ಪ್ರಧಾನಿ ಮೋದಿಯವರನ್ನು ಕೇಳಿದಾಗ, “ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಮುಂದೆ ಯಾವುದೇ ಅನುಕೂಲ ಇಲ್ಲ ಎಂದು ಹೇಳುವ ರಾಜಕೀಯ ವರ್ಗವಿದೆ. ರಾಜ್ಯಗಳಲ್ಲಿ ಪಕ್ಷಕ್ಕೆ ಅಷ್ಟೊಂದು ಬೆಂಬಲ ಸಿಗುತ್ತಿಲ್ಲ ಎಂದಿದ್ದರು. ಆದರೆ ಫಲಿತಾಂಶಗಳಿಂದ ಆ ಮಿಥ್ಯೆ ಕೊನೆಯಾಗದೆ. ನಾವು ಮೂರು ರಾಜ್ಯಗಳಲ್ಲಿ ಸರ್ಕಾರಗಳನ್ನು ರಚಿಸಿದ್ದೇವೆ ಮಾತ್ರವಲ್ಲ. ತೆಲಂಗಾಣದಲ್ಲಿಯೂ ಬಿಜೆಪಿಯ ಮತ ಶೇಕಡಾವಾರು ದಾಖಲೆಯ ಹೆಚ್ಚಳವಾಗಿದೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ: PM Modi : ಸೂರತ್ನಲ್ಲಿ ಎರಡು ಬೃಹತ್ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿಯವರ ಹೆಸರಿನಲ್ಲಿ ಮತಯಾಚನೆ ಮಾಡಲಾಯಿತು. ಈ ಪ್ರವೃತ್ತಿ 2024 ರಲ್ಲಿಯೂ ಮುಂದುವರಿಯುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ‘ಗ್ಯಾರಂಟಿ’ ಕೇವಲ ಮೂರು ಅಕ್ಷರಗಳಿಗೆ ಸೀಮಿತವಾಗಿಲ್ಲ. ಇದು ನಾಲ್ಕು ಮಾನದಂಡಗಳನ್ನು ಹೊಂದಿದೆ – ನೀತಿ, ಉದ್ದೇಶಗಳು, ನಾಯಕತ್ವ ಮತ್ತು ಕೆಲಸದ ದಾಖಲೆಗಳು. “ಅದಕ್ಕಾಗಿಯೇ ನಾನು ಮೋದಿಯವರ ಗ್ಯಾರಂಟಿ ಎಂದು ಹೇಳಿದಾಗ ಸಾರ್ವಜನಿಕರು ಕಳೆದ ಕೆಲವು ವರ್ಷಗಳ ಸಂಪೂರ್ಣ ಇತಿಹಾಸವನ್ನು ನೋಡಿದ್ದಾರೆ. ಸಾರ್ವಜನಿಕರು ನಮ್ಮ ನೀತಿಗಳನ್ನು ಬೆಂಬಲಿಸುತ್ತಿದ್ದಾರೆ, ನಮ್ಮ ಉದ್ದೇಶಗಳನ್ನು ಬೆಂಬಲಿಸುತ್ತಿದ್ದಾರೆ, ನಮ್ಮ ನಾಯಕತ್ವವನ್ನು ಬೆಂಬಲಿಸುತ್ತಿದ್ದಾರೆ ಮತ್ತು ನಮ್ಮ ಟ್ರ್ಯಾಕ್ ರೆಕಾರ್ಡ್ ಅನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ ” ಎಂದು ಹೇಳಿದ್ದಾರೆ.
ಯೋಜನೆಗಳ ಮಾಹಿತಿ ನೀಡಿದ ಮೋದಿ
ಕಳೆದ ಒಂಬತ್ತು ವರ್ಷಗಳಲ್ಲಿ ಬಡವರಿಗೆ ನಾಲ್ಕು ಕೋಟಿ ಮನೆಗಳನ್ನು ನಿರ್ಮಿಸುವುದು, ಉಚಿತ ಪಡಿತರ ಯೋಜನೆ, ರೈಲ್ವೆಯ ಪರಿವರ್ತನೆ ಮತ್ತು ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ಮಟ್ಟದಲ್ಲಿ ಪಕ್ಷದ ನಾಯಕತ್ವದ ವಿಷಯದಲ್ಲಿ ಬಿಜೆಪಿ ಸರ್ಕಾರ ಮಾಡಿದ ಕೆಲಸಗಳನ್ನು ಮೋದಿ ಎತ್ತಿ ತೋರಿಸಿದರು. ಈ ಹಿಂದೆ, ಜನರು ತಮ್ಮ ಹಕ್ಕುಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಲಂಚ ನೀಡಬೇಕಾಗಿತ್ತು. ಈಗ ಸರ್ಕಾರವು ಜನರ ಬಳಿಗೆ ಹೋಗುತ್ತಿದೆ. ಹಕ್ಕುಗಳನ್ನು ಹೊಂದಿರುವವರನ್ನು ತಲುಪುತ್ತಿದೆ” ಎಂದು ಪ್ರಧಾನಿ ಹೇಳಿದರು.
ವಿರೋಧ ಪಕ್ಷಗಳ ಭ್ರಮೆ ಸುಳ್ಳು
ಕಾಂಗ್ರೆಸ್ ರಚಿಸಿದ ವಿರೋಧ ಪಕ್ಷಗಳ ಬಣದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರು “ಈ ಚುನಾವಣೆಗಳು ಕಾಂಗ್ರೆಸ್ ವಿರುದ್ಧ ಮಾತ್ರವಲ್ಲ ಅವರ ಬಣದ ವಿರುದ್ಧದ ತೀರ್ಮಾನವಾಗಿದೆ. ಅವರು ಬಿಜೆಪಿ ಅಭ್ಯರ್ಥಿಗಳ ಮತಗಳನ್ನು ಕಡಿಮೆ ಮಾಡಲು ಯೋಜಿಸಿದ್ದರು. ಭ್ರಮೆಯನ್ನು ಸೃಷ್ಟಿಸಿದ್ದರು. ಆದರೆ ಮತದಾರರು ಅವರ ಎಲ್ಲಾ ಪಿತೂರಿಗಳನ್ನು ವಿಫಲಗೊಳಿಸಿದರು ಎಂದು ಹೇಳಿದರು.
ಉತ್ತರ ಹಾಗೂ ದಕ್ಷಿಣ ಭಾರತ ಎಂಬ ಚರ್ಚೆಯನ್ನು ಪ್ರತಿಪಕ್ಷಗಳು ಪ್ರಾರಂಭಿಸಿದ “ಸುಳ್ಳುಗಳ ಬಲೂನ್” ಎಂದು ಮೋದಿ ಜರೆದಿದ್ದಾರೆ. “ದೇಶವನ್ನು ವಿಭಜಿಸುವ ಕೆಲಸವನ್ನು ರಾಜಕೀಯವು ಹತಾಶೆಯಿಂದ ಮಾಡಲಾಗುತ್ತಿದೆ ಎಂದು ಹೇಳಿದರು. ಅವರು ಅಧಿಕಾರಕ್ಕೆ ಬರಲು ಏನು ಬೇಕಾದರೂ ಮಾಡಲು ಪ್ರಯತ್ನಿಸುತ್ತಿದ್ದಾರೆ. ದೇಶ ಎಲ್ಲವನ್ನೂ ಗಮನಿಸುತ್ತಿದೆ. ದೇಶದ ಜನರು ಇದನ್ನು ನೋಡುತ್ತಿದ್ದಾರೆ. ದೇಶದ ಜನರ ತಿಳುವಳಿಕೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ” ಎಂದು ಹೇಳಿದರು.