ಕೋಲ್ಕೊತಾ: ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾದ ‘ಬೇಷರಮ್ ರಂಗ್’ ಹಾಡು ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಕೇಸರಿ ಕುರಿತ ಹಾಡಿನ ವಿವಾದದ ಹಿನ್ನೆಲೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ಅವರು ಕೋಲ್ಕೊತಾದಲ್ಲಿ (Arijit Singh Concert Cancelled) ನಡೆಸಿಕೊಡಬೇಕಿದ್ದ ಸಂಗೀತ ಕಛೇರಿ (Concert) ರದ್ದಾಗಿದೆ.
ಫೆಬ್ರವರಿ 18ರಂದು ಅರಿಜಿತ್ ಸಿಂಗ್ ಅವರು ಕೋಲ್ಕೊತಾದ ಎಕೊ ಪಾರ್ಕ್‌ನಲ್ಲಿ ಕನ್ಸರ್ಟ್ ನಡೆಸಿಕೊಡಬೇಕಿತ್ತು. ಆದರೆ, ಇದನ್ನು ಪಶ್ಚಿಮ ಬಂಗಾಳ ಸರ್ಕಾರವು ರದ್ದುಗೊಳಿಸಿದೆ. ಮತ್ತೊಂದೆಡೆ, ಕನ್ಸರ್ಟ್ ರದ್ದಾಗಿರುವ ಕುರಿತು ಪಶ್ಚಿಮ ಬಂಗಾಳ ಸರ್ಕಾರ ಒಂದು ಕಾರಣ ನೀಡಿದರೆ, ಬಿಜೆಪಿ ಹೇಳುತ್ತಿರುವುದೇ ಬೇರೆಯಾಗಿದೆ.
ಬಿಜೆಪಿ ಹೇಳುವುದೇನು?
ಇತ್ತೀಚೆಗೆ ಕೋಲ್ಕೊತಾದಲ್ಲಿ ನಡೆದ ಕೋಲ್ಕೊತಾ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ (KIFF) ಮಮತಾ ಬ್ಯಾನರ್ಜಿ ಭಾಗವಹಿಸಿದ್ದ ವೇಳೆ ಅರಿಜಿತ್ ಸಿಂಗ್ ಅವರು “ರಂಗ್ ದೆ ತು ಮೋಹೆ ಗೆರುವಾ” (ನನ್ನ ದೇಹದ ತುಂಬ ಕೇಸರಿ ಬಳಿ) ಎಂಬ ಹಾಡು ಹಾಡಿದ್ದರು. ಹಿಂದುತ್ವ ಸಾರುವ ಕೇಸರಿ ಬಣ್ಣದ ಕುರಿತು ಹಾಡು ಹಾಡಿದ್ದಕ್ಕಾಗಿಯೇ ಅರಿಜಿತ್ ಸಿಂಗ್ ಕನ್ಸರ್ಟ್ ರದ್ದಾಗಿದೆ ಎಂದು ಬಿಜೆಪಿ ಹೇಳಿದೆ.
ಜಿ-20 ಸಭೆಯ ಕಾರಣ ನೀಡಿದ ಬಂಗಾಳ ಸರ್ಕಾರ
ಜಿ-20 ಸಭೆಯ ಕಾರಣದಿಂದಾಗಿ ಅರಿಜಿತ್ ಸಿಂಗ್ ಶೋ ರದ್ದಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ. “ಎಕೊ ಪಾರ್ಕ್ ಎದುರು ಜಿ-20 ಸಭೆ ನಡೆಯಲಿದೆ. ವಿದೇಶದ ಹಲವು ಗಣ್ಯರು ಭಾಗವಹಿಸುತ್ತಾರೆ. ಅರಿಜಿತ್ ಸಿಂಗ್ ಶೋ ಇದ್ದರೆ ಹೆಚ್ಚಿನ ಜನ ಸೇರುತ್ತಾರೆ. ಆಗ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ಇದೆ. ಹಾಗಾಗಿ, ಶೋ ಕ್ಯಾನ್ಸಲ್ ಮಾಡಲಾಗಿದೆ” ಎಂದು ರಾಜ್ಯ ಸಚಿವ ಫಿರ್ಹಾದ್ ಹಕೀಮ್ ತಿಳಿಸಿದ್ದಾರೆ.
ಇದನ್ನೂ ಓದಿ | Bharat jodo ಯಾತ್ರೆಯ ಹಾಡಿನಿಂದ ಕೆಜಿಎಫ್-2 ಸಂಗೀತ ತೆಗೆಯದೆ ನ್ಯಾಯಾಂಗ ನಿಂದನೆ: ರಾಹುಲ್, ಇತರರಿಗೆ ನೋಟಿಸ್