ನವ ದೆಹಲಿ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಂಶಿಪೋರಾದಲ್ಲಿ 2020ರಲ್ಲಿ ಮೂವರನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕ್ಯಾಪ್ಟನ್ ಭೂಪೇಂದ್ರ ಸಿಂಗ್ ಅಲಿಯಾಸ್ ಮೇಜರ್ ಬಶೀರ್ ಖಾನ್ ಅವರಿಗೆ ಸೇನಾ ನ್ಯಾಯಲಯ ಜೀವಾವಧಿ ಶಿಕ್ಷೆಯನ್ನು ಶಿಫಾರಸ್ಸು ಮಾಡಿದ್ದು, ಈ ಬಗ್ಗೆ ಅಂತಿಮವಾಗಿ ಸೇನಾ ಸಿಬ್ಬಂದಿ ಮುಖ್ಯಸ್ಥರು ತೀರ್ಮಾನ ಮಾಡಲಿದ್ದಾರೆ.
2018ರ 2020ರಲ್ಲಿ ಶೋಪಿಯಾನ್ ಜಿಲ್ಲೆಯಲ್ಲಿ ಇಮ್ತಿಯಾಜ್ ಅಹ್ಮದ್ (20), ಅಬ್ರಾರ್ ಅಹ್ಮದ್ (25) ಮತ್ತು ಮೊಹಮ್ಮದ್ ಅಬ್ರಾರ್ (16) ಎಂಬ ಮೂವರನ್ನು ಶೂಟ್ ಮಾಡಿ ಕೊಲ್ಲಲಾಗಿತ್ತು. ಇವರು ರಾಜೌರಿ ಮೂಲದವರಾಗಿದ್ದರು. ಈ ಶೂಟೌಟ್ ನಡೆಸಿದ್ದ ಕ್ಯಾಪ್ಟನ್ ಭೂಪೇಂದ್ರ ಸಿಂಗ್ ಅವರು, ಈ ಮೂವರೂ ಉಗ್ರರು ಎಂದು ಬಿಂಬಿಸಿದ್ದರು. ಆದರೆ ಹತ್ಯೆಗೀಡಾದವರ ಕುಟುಂಬಸ್ಥರು ದೂರು ನೀಡಿದ್ದರು. ಹಾಗೇ, ಸ್ಥಳೀಯರೂ ಕೂಡ ಇದೊಂದು ನಕಲಿ ಎನ್ಕೌಂಟರ್ ಎಂದೇ ಪ್ರತಿಪಾದಿಸಿದ್ದರು. ಬಳಿಕ ಸೇನೆ, ಈ ಕೇಸ್ ತನಿಖೆಗಾಗಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಕ್ಯಾಪ್ಟನ್ ಭೂಪೇಂದ್ರ ಸಿಂಗ್ ಅವರನ್ನು ಕೋರ್ಟ್ ಮಾರ್ಷಲ್ಗೆ ಒಳಪಡಿಸಲಾಗಿತ್ತು. ಮಿಲಿಟರಿ ಕಾನೂನು ಅನ್ವಯ ಅವರ ವಿಚಾರಣೆ ನಡೆದಿತ್ತು. ಈಗ ಭೂಪೇಂದ್ರ ಸಿಂಗ್ ವಿಚಾರಣೆ ಮುಕ್ತಾಯಗೊಂಡಿದೆ. ಅವರಿಗೆ ಜೀವಾವಧಿ ಶಿಕ್ಷೆ ಕೊಡುವಂತೆ ಕೋರ್ಟ್ ಶಿಫಾರಸು ಮಾಡಿದೆ.
ಯಾರೇ ತಪ್ಪು ಮಾಡಿದ್ದರೂ ಸರಿ, ಆರೋಪಿ ಯಾರೇ ಆಗಿದ್ದರೂ ಸರಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಸೇನೆ ಬದ್ಧವಾಗಿದೆ. ಸೇನಾ ಕಾರ್ಯಾಚರಣೆ ಯಾವಗಳೂ ಅದರ ತತ್ವಗಳಿಗೆ ಒಳಪಟ್ಟು, ನ್ಯಾಯಬದ್ಧವಾಗಿ ಇರಬೇಕು. ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅನಗತ್ಯ ಹತ್ಯೆ ಕುರಿತಂತೆ ನಮ್ಮದು ಶೂನ್ಯ ಸಹಿಷ್ಣುತೆ ಎಂದು ಸೇನೆ ಹೇಳಿದ್ದಾಗಿ ವರದಿಯಾಗಿದೆ.