Site icon Vistara News

Landmine Blast: ಕಾಶ್ಮೀರದಲ್ಲಿ ನೆಲಬಾಂಬ್‌ ಸ್ಫೋಟ; ಒಬ್ಬ ಯೋಧ ಹುತಾತ್ಮ, ಇಬ್ಬರಿಗೆ ಗಾಯ

Jammu Kashmir Landmine Blast

Army jawan killed, another hurt in landmine Blast near LoC in Jammu Kashmir

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸೈನಿಕರನ್ನು ಗುರಿಯಾಗಿಸಿ ಉಗ್ರರು ದಾಳಿ ಮುಂದುವರಿಸಿದ್ದಾರೆ. ಕಣಿವೆಯ ನೌಶೇರಾ ಜಿಲ್ಲೆಯಲ್ಲಿರುವ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ (LoC) ಬಳಿ ನೆಲ ಬಾಂಬ್‌ ಸ್ಫೋಟಗೊಂಡ (Landmine Blast) ಕಾರಣ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಇನ್ನು ಇಬ್ಬರು ಯೋಧರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಸೇನೆಯ ಆಸ್ಪತ್ರೆಯಲ್ಲಿ (Army Hospital) ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ನೌಶೇರಾದ ಬಳಿ ಇರುವ ಗಡಿ ನಿಯಂತ್ರಣ ರೇಖೆ ಹತ್ತಿರ ಸಿಖ್‌ ಲೈಟ್‌ ಬೆಟಾಲಿಯನ್‌ನ 80ನೇ ಇನ್‌ಫ್ಯಾಂಟ್ರಿ ಬ್ರಿಗೇಡ್‌ ಯೋಧರು ಗಸ್ತು ತಿರುಗುತ್ತಿದ್ದರು. ಬೆಳಗ್ಗೆ 10.30ರ ಸುಮಾರಿಗೆ ನೆಲ ಬಾಂಬ್‌ ಸ್ಫೋಟಗೊಂಡಿದೆ. ಗಾಯಗೊಂಡ ಮೂವರು ಯೋಧರನ್ನು ಕೂಡಲೆ ಉಧಮ್‌ಪುರಕ್ಕೆ ಏರ್‌ಲಿಫ್ಟ್‌ ಮಾಡಲಾಯಿತು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಒಬ್ಬ ಯೋಧ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ. ಯಾವ ಉಗ್ರ ಸಂಘಟನೆಯ ಉಗ್ರರು ದಾಳಿ ನಡೆಸಿದ್ದಾರೆ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಚೀನಾ ಶಸ್ತ್ರಾಸ್ತ್ರಗಳ ಬಳಕೆ

ಚೀನಾದ ಬಂದೂಕು, ಬಾಡಿಸೂಟ್‌ ಕ್ಯಾಮೆರಾಗಳು, ಕಮ್ಯುನಿಕೇಶನ್‌ ಡಿವೈಸ್‌ಗಳು ಸೇರಿ ಹಲವು ಉಪಕರಣಗಳನ್ನು ಜಮ್ಮು-ಕಾಶ್ಮೀರದಲ್ಲಿರುವ ಉಗ್ರರು ಇತ್ತೀಚೆಗೆ ಬಳಸುತ್ತಿದ್ದಾರೆ. ಚೀನಾದಿಂದ ನೆರವು ಪಡೆಯುವ ಉಗ್ರರು ಕಣಿವೆಯಲ್ಲಿ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಇತ್ತೀಚಿನ ದಾಳಿಗಳ ವೇಳೆ ಉಗ್ರರು ಚೀನಾ ಶಸ್ತ್ರಾಸ್ತ್ರಗಳನ್ನು ಬಳಸಿರುವುದು ದೃಢವಾಗಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷದ ಡಿಸೆಂಬರ್‌ 21ರಂದು ಜಮ್ಮು-ಕಾಶ್ಮೀರದ ರಾಜೌರಿ ಸೆಕ್ಟರ್‌ನ ಥಾನಮಂಡಿ ಪ್ರದೇಶದಲ್ಲಿ ಎರಡು ಸೇನಾ ವಾಹನಗಳ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಇದೇ ವೇಳೆ ಮೂವರು ಯೋಧರು ಗಾಯಗೊಂಡಿದ್ದರು. ಇನ್ನು ನವೆಂಬರ್‌ನಲ್ಲೂ ರಾಜೌರಿಯ ಕಲಾಕೋಟೆಯಲ್ಲಿ ಭಾರತೀಯ ಸೇನೆ ಮತ್ತು ಅದರ ವಿಶೇಷ ಪಡೆಗಳು ನಡೆಸಿದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಹುತಾತ್ಮರಾಗಿದ್ದರು.

ಇದನ್ನೂ ಓದಿ: Encounter in UP: ವಾರದ ಅಂತರದಲ್ಲಿ ಯೋಗಿ ನಾಡಲ್ಲಿ ಮತ್ತೊಂದು ಎನ್‌ಕೌಂಟರ್‌; ಕೊಲೆ ಆರೋಪಿ ಫಿನಿಶ್‌

100ಕ್ಕೂ ಅಧಿಕ ಉಗ್ರರು ಸಕ್ರಿಯ

ಜಮ್ಮು-ಕಾಶ್ಮೀರದಲ್ಲಿ ಕಳೆದ ಒಂದು ವರ್ಷದಲ್ಲಿ 30ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದು, 204 ಉಗ್ರರನ್ನು ಬಂಧಿಸಿದರೂ ಇನ್ನೂ 111 ಉಗ್ರರು ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇವರಲ್ಲಿ 40 ಉಗ್ರರು ಸ್ಥಳೀಯರಾದರೆ, 71 ಉಗ್ರರು ವಿದೇಶದವರಾಗಿದ್ದಾರೆ. ಅಂದ ಹಾಗೆ 2022ರಲ್ಲಿ 137 ಉಗ್ರರು ಸಕ್ರಿಯರಾಗಿದ್ದರು. ಇದನ್ನು ಸೇನೆಯು 111ಕ್ಕೆ ಇಳಿಸಿದೆ. ಇವರೆಲ್ಲರನ್ನೂ ಎನ್‌ಕೌಂಟರ್‌ ಮಾಡುವುದು ಸೇನೆಯ ಗುರಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version