ನವದೆಹಲಿ: ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ (Women Officers In Army) ಸರಿಯಾದ ಪ್ರಾಧಾನ್ಯತೆ ಸಿಗುತ್ತಿಲ್ಲ. ಈ ಕುರಿತು ಕೂಡಲೇ ಸುಧಾರಣೆ ಜಾರಿಗೆ ತನ್ನಿ ಎಂದು ಸೇನೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. “ಸೇನೆಯಲ್ಲಿ ಹೆಣ್ಣುಮಕ್ಕಳಿಗೆ ಸರಿಯಾದ ಪ್ರಾಮುಖ್ಯತೆ ಸಿಗುತ್ತಿಲ್ಲ. ಅರ್ಹತೆ ಇದ್ದರೂ ಬಡ್ತಿ ನೀಡುತ್ತಿಲ್ಲ” ಎಂದು ಆರೋಪಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು, ಹೀಗೆ ಅಸಮಾಧಾನ ವ್ಯಕ್ತಪಡಿಸಿದೆ.
ಬಡ್ತಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಸೇನೆಯ ೩೪ ಮಹಿಳಾ ಅಧಿಕಾರಿಗಳು ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ನ್ಯಾಯಪೀಠವು ವಿಚಾರಣೆ ನಡೆಸಿತು. “ಪುರುಷ ಕಿರಿಯ ಅಧಿಕಾರಿಗಳು ಬೇಗನೆ ಬಡ್ತಿ ಪಡೆಯುತ್ತಿದ್ದಾರೆ. ಕೊಂಬಾಟ್ ಹಾಗೂ ಕಮಾಂಡಿಂಗ್ ಹುದ್ದೆಗಳನ್ನು ನೀಡಲಾಗುತ್ತಿದೆ. ಆದರೆ, ಹೆಣ್ಣುಮಕ್ಕಳಿಗೆ ಬಡ್ತಿ ನೀಡುತ್ತಿಲ್ಲ” ಎಂಬುದು ಮಹಿಳಾ ಅಧಿಕಾರಿಗಳ ಆರೋಪವಾಗಿದೆ.
ತಾರತಮ್ಯದ ಕುರಿತು ಪ್ರತಿಕ್ರಿಯಿಸಿದ ನ್ಯಾಯಾಲಯವು, “ಸೇನೆಯು ಮಹಿಳಾ ಅಧಿಕಾರಿಗಳಿಗೆ ಸರಿಯಾದ ಪ್ರಾಮುಖ್ಯ ನೀಡುತ್ತಿಲ್ಲ ಎಂಬುದು ನಮಗೆ ಮನವರಿಕೆಯಾಗಿದೆ. ನ್ಯಾಯಾಲಯವು ಮಂಗಳವಾರ (ಡಿಸೆಂಬರ್ ೧೩) ಈ ಕುರಿತು ಆದೇಶ ಹೊರಡಿಸುತ್ತದೆ. ಇದಕ್ಕೂ ಮುನ್ನ ಸೇನೆಯು ಸುಧಾರಣೆ ಕ್ರಮಗಳನ್ನು ಜಾರಿಗೆ ತರಬೇಕು. ಯಾವ ಕ್ರಮಗಳನ್ನು ಜಾರಿಗೆ ತರಲಾಗುತ್ತದೆ ಎಂಬ ಕುರಿತು ಮಾಹಿತಿ ನೀಡಬೇಕು” ಎಂದು ಸ್ಪಷ್ಟಪಡಿಸಿತು.
ಇದನ್ನೂ ಓದಿ | Army Salute | ಭೂಸೇನೆ, ನೌಕಾಪಡೆ, ವಾಯುಸೇನೆಗಳು ಯಾಕೆ ಬೇರೆ ಬೇರೆ ಸೆಲ್ಯೂಟ್ ಹೊಂದಿವೆ?