Site icon Vistara News

ಲಡಾಕ್‌ನಲ್ಲಿ ಶ್ಯೋಕ್‌ ನದಿಗೆ ಬಿದ್ದ ಸೇನಾ ವಾಹನ; 7 ಯೋಧರ ದುರ್ಮರಣ

Shyok River

ದೆಹಲಿ: ಭಾರತೀಯ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನ ಲಡಾಖ್‌ನ ಶ್ಯೋಕ್‌ ನದಿಗೆ (Shyok River In Ladakh) ಬಿದ್ದು, ಒಟ್ಟು ಏಳು ಮಂದಿ ಯೋಧರು ಮೃತರಾಗಿದ್ದಾರೆ. ಈ ವಾಹನದಲ್ಲಿ ಒಟ್ಟು 26 ಮಂದಿ ಯೋಧರು ಇದ್ದರು. ಈ ಬಗ್ಗೆ ಭಾರತೀಯ ಸೇನೆ ಹೇಳಿಕೆ ಬಿಡುಗಡೆ ಮಾಡಿದ್ದು, ಯೋಧರು ಇಂದು ಬೆಳಗ್ಗೆ 9ಗಂಟೆ ಹೊತ್ತಿಗೆ ಪರ್ತಾಪುರದಲ್ಲಿರುವ ಟ್ರಾನ್ಸಿಟ್‌ ಕ್ಯಾಂಪ್‌ ( ಸೈನಿಕರ ತಾತ್ಕಾಲಿಕ ಶಿಬಿರ)ನಿಂದ ಸಬ್‌ಸೆಕ್ಟರ್‌ ಹನೀಫ್‌ನಲ್ಲಿರುವ ತಮ್ಮ ನಿಯೋಜಿತ ಸ್ಥಳಕ್ಕೆ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಆಯತಪ್ಪಿದ ವಾಹನ ರಸ್ತೆಯಿಂದ 50-60 ಅಡಿ ಆಳಕ್ಕೆ ಬಿದ್ದಿದೆ. ವಾಹನದಲ್ಲಿದ್ದ ಎಲ್ಲ ಯೋಧರೂ ಗಾಯಗೊಂಡಿದ್ದರು. ಅದರಲ್ಲಿ ಏಳುಮಂದಿ ಸಾವನ್ನಪ್ಪಿದ್ದಾರೆ.

ಉಳಿದ ಗಾಯಗೊಂಡ ಯೋಧರನ್ನೆಲ್ಲ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಲೇಹ್‌ನಿಂದ ತಜ್ಞ ವೈದ್ಯರ ತಂಡ ಪರ್ತಾಪುರಕ್ಕೆ ಧಾವಿಸಿದೆ. ಇವರಿಗೆಲ್ಲ ಅತ್ಯುತ್ತಮ ಚಿಕಿತ್ಸೆ ನೀಡಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಯಾರ ಸ್ಥಿತಿ ಗಂಭೀರವಾಗಿದೆಯೋ ಅವರನ್ನೆಲ್ಲ ಏರ್‌ಲಿಫ್ಟ್‌ ಮಾಡಿ ವೆಸ್ಟರ್ನ್‌ ಕಮಾಂಡ್‌ನಲ್ಲಿರುವ (ಹರ್ಯಾಣ) ಆಸ್ಪತ್ರೆಗಳಿಗೆ ದಾಖಲಿಸಲು ವ್ಯವಸ್ಥೆ ಮಾಡಲಾಗಿದೆ ಎಂದೂ ಭಾರತೀಯ ಸೇನೆ ತಿಳಿಸಿದೆ.

ಪ್ರಧಾನಿ ಮೋದಿ ಟ್ವೀಟ್‌
ಘಟನೆ ನಡೆದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ. ಲಡಾಖ್‌ನಲ್ಲಿ ನಮ್ಮ ವೀರ ಸೇನಾನಿಗಳನ್ನು ಕರೆದೊಯ್ಯುತ್ತಿದ್ದ ವಾಹನ ಅಪಘಾತವಾಗಿದ್ದು, ಏಳು ಯೋಧರು ಮೃತಪಟ್ಟು, ಇನ್ನುಳಿದವರು ಗಾಯಗೊಂಡ ವಿಚಾರ ಕೇಳಿ ತೀವ್ರ ದುಃಖವಾಗಿದೆ. ಈ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಭಗವಂತ ಕರುಣಿಸಲಿ. ಗಾಯಗೊಂಡವರು ಬಹುಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಅಗತ್ಯವಿರುವ ಎಲ್ಲ ನೆರವನ್ನೂ ನೀಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಸೇನೆಯ NO.2 ಸ್ಥಾನದಲ್ಲಿ ಕನ್ನಡಿಗ: ಉಪ ಮುಖ್ಯಸ್ಥರಾಗಿ ಲೆ.ಜ. ರಾಜು

Exit mobile version