ಲಖನೌ: ಪ್ರವಾದಿ ಮೊಹಮ್ಮದರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಪೊಲೀಸರು ಜೈಷೆ ಮೊಹಮ್ಮದ್‌ನ ಶಂಕಿತ ಉಗ್ರನೊಬ್ಬನನ್ನು ಬಂಧಿಸಿದ್ದಾರೆ.
“ಬಂಧಿತ ಉಗ್ರನನ್ನು ಮೊಹಮ್ಮದ್ ನದೀಮ್ ಎಂದು ಗುರುತಿಸಲಾಗಿದ್ದು, ಈತ ಜಿಲ್ಲೆ ಕುಂಡಾ ಕಾಲಾ ಗ್ರಾಮದ ನಿವಾಸಿಯಾಗಿದ್ದಾನೆ. ಇತ್ತೀಚೆಗೆ ಈತ ಪಾಕಿಸ್ತಾನ ಹಾಗೂ ಅಫಘಾನಿಸ್ತಾನದವರ ಜತೆ ಚಾಟ್ ಮಾಡಿದ್ದು, ವಾಯ್ಸ್ ನೋಟ್‌ಗಳನ್ನೂ ಕಳುಹಿಸಿದ್ದಾನೆ. ಹಾಗಾಗಿ, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ,ʼʼ ಎಂದು ಉತ್ತರ ಪ್ರದೇಶ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮೊಹಮ್ಮದ್ ನದೀಮ್ ಬಳಿ ಎರಡು ಸಿಮ್ ಕಾರ್ಡ್, ಬಾಂಬ್ ತಯಾರಿಸಲು ಬಳಸುವ ಕಚ್ಚಾ ವಸ್ತುಗಳು ಸಿಕ್ಕಿವೆ. ಈತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 2008ರಿಂದಲೂ ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ಜತೆ ನಂಟು ಹೊಂದಿದ್ದು, ವಿಶೇಷ ತರಬೇತಿಗಾಗಿ ಪಾಕಿಸ್ತಾನ ಹಾಗೂ ಸಿರಿಯಾಗೆ ಆಹ್ವಾನಿಸಲಾಗಿತ್ತು ಎಂದು ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ಕೆಲ ತಿಂಗಳುಗಳ ಹಿಂದೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಕುರಿತು ನೀಡಿದ ಹೇಳಿಕೆಗಳ ವಿರುದ್ಧ ದೇಶ ಮಾತ್ರವಲ್ಲ ವಿದೇಶದಲ್ಲೂ ಆಕ್ರೋಶ ವ್ಯಕ್ತವಾಗಿತ್ತು. ಹಾಗಾಗಿ, ಇವರನ್ನು ಬಿಜೆಪಿಯು ಪಕ್ಷದಿಂದಲೇ ಉಚ್ಚಾಟನೆಗೊಳಿಸಿದೆ. ಆದಾಗ್ಯೂ, ನೂಪುರ್ ಶರ್ಮಾ ಹತ್ಯೆಗೆ ಉಗ್ರರು ಸಂಚು ರೂಪಿಸುತ್ತಿದ್ದಾರೆ ಎಂಬ ವರದಿಗಳು ಕೇಳಿಬಂದಿವೆ. ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರ ಬಂಧನವಾಗಿದೆ.
ಇದನ್ನೂ ಓದಿ | ನೂಪುರ್ ಶರ್ಮಾ ಮನವಿಗೆ ಸುಪ್ರೀಂಕೋರ್ಟ್ ಮನ್ನಣೆ; ಎಫ್ಐಆರ್ ವರ್ಗಾಯಿಸಲು ಸಮ್ಮತಿ