ನವದೆಹಲಿ: ಹವಾಲ ಹಗರಣದಲ್ಲಿ ಸಿಲುಕಿ ಜೈಲು ಪಾಲಾಗಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್ (Satyendra Jain) ಅವರಿಗೆ ಜೈಲಿನಲ್ಲಿ ವಿವಿಐಪಿ ಟ್ರೀಟ್‌ಮೆಂಟ್ ಜತೆಗೆ ಅತಿಥಿಗಳ ಭೇಟಿ, ಸತ್ಕಾರವೂ ಮುಂದುವರಿದಿದೆ. ಇತ್ತೀಚೆಗಷ್ಟೇ, ಸತ್ಯೇಂದ್ರ ಜೈನ್ ಅವರಿಗೆ ಮಸಾಜ್ ಮಾಡುತ್ತಿರುವ, ಭರ್ಜರಿ ಭೋಜನ ನೀಡಿರುವ ಸಿಸಿಟಿವಿ ದೃಶ್ಯಗಳು ಜಗಜ್ಜಾಹೀರಾದ ಬೆನ್ನಲ್ಲೇ ಮತ್ತೊಂದು ವಿವಿಐಪಿ ಟ್ರೀಟ್‌ಮೆಂಟ್‌ನ ವಿಡಿಯೊ ಬಹಿರಂಗವಾಗಿದೆ.
ತಿಹಾರ ಜೈಲಿನಲ್ಲಿರುವ ಸತ್ಯೇಂದ್ರ ಜೈನ್ ಅವರನ್ನು ಸೆಪ್ಟೆಂಬರ್ 12ರಂದು ರಾತ್ರಿ 8 ಗಂಟೆ ಸುಮಾರಿಗೆ ಮೂವರು ಭೇಟಿಯಾಗಿದ್ದಾರೆ. ಮಂಚದ ಮೇಲೆ ಕುಳಿತ ಜೈನ್ ಅವರು ಅತಿಥಿಗಳ ಜತೆ ಮಾತುಕತೆ ನಡೆಸಿದ ಬಳಿಕ ಅವರನ್ನು ಬೀಳ್ಕೊಟ್ಟಿದ್ದಾರೆ. ಇದಾದ ಕೆಲವೇ ಕ್ಷಣದಲ್ಲಿ ಅಮಾನತುಗೊಂಡಿರುವ ಜೈಲು ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಅವರು ಸತ್ಯೇಂದ್ರ ಜೈನ್ ಅವರ ಕೋಣೆಗೆ ಆಗಮಿಸಿ ಮಾತುಕತೆ ನಡೆಸಿದ್ದಾರೆ. ಇಷ್ಟೆಲ್ಲ ದೃಶ್ಯಗಳಿರುವ 10 ನಿಮಿಷದ ವಿಡಿಯೊ ಈಗ ವೈರಲ್ ಆಗಿದೆ.
ಕೆಲ ದಿನಗಳ ಹಿಂದಷ್ಟೇ ಸತ್ಯೇಂದ್ರ ಜೈನ್ ಅವರ ತಲೆ ಹಾಗೂ ಕಾಲುಗಳಿಗೆ ಮಸಾಜ್ ಮಾಡುತ್ತಿರುವ ಆರು ನಿಮಿಷದ ವಿಡಿಯೊ ವೈರಲ್ ಆಗಿತ್ತು. ಅಲ್ಲದೆ, ಜೈಲಲ್ಲಿ ಸಚಿವರು ಭರ್ಜರಿ ಭೋಜನ ಮಾಡುತ್ತಿರುವ ದೃಶ್ಯಾವಳಿಗಳೂ ಲಭ್ಯವಾಗಿದ್ದವು. ಈಗ ಅತಿಥಿಗಳು ಹಾಗೂ ಅಮಾನತುಗೊಂಡಿರುವ ಅಧಿಕಾರಿಯ ಭೇಟಿಗೂ ಅವಕಾಶ ಕಲ್ಪಿಸಲಾಗಿದೆ. ಇದರ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ | Video | ಜೈಲಲ್ಲಿ ಸರಿಯಾಗಿ ಊಟ ಕೊಡದೆ 28 ಕೆಜಿ ತೂಕ ನಷ್ಟವಾಯಿತು ಎಂದಿದ್ದ ದೆಹಲಿ ಸಚಿವ ಸತ್ಯೇಂದ್ರ ಜೈನ್; ಆದರೆ ವಾಸ್ತವ ಏನು?