ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದು ತೀರ್ಮಾನ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ 11ನೇ ದಿನವೂ ವಿಚಾರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದದ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ರದ್ದುಗೊಂಡಿರುವ 35 ಎ ವಿಧಿಯನ್ನು (Article 35A) ಪ್ರಸ್ತಾಪಿಸಿದ್ದಾರೆ. “ಸಂವಿಧಾನದ 35 ಎ ವಿಧಿಯು ಜಮ್ಮು-ಕಾಶ್ಮೀರ ನಿವಾಸಿಗಳು ಅಲ್ಲದವರ ಹಕ್ಕುಗಳನ್ನು ಮೂಲಭೂತ ಹಕ್ಕುಗಳನ್ನು ಕಸಿಯುತ್ತಿತ್ತು” ಎಂದಿದ್ದಾರೆ.
“ಜಮ್ಮು-ಕಾಶ್ಮೀರ ನಿವಾಸಿಗಳಿಗೆ 35ಎ ವಿಧಿಯು ವಿಶೇಷ ಸ್ಥಾನಮಾನವನ್ನೇನೋ ನೀಡುತ್ತಿತ್ತು. ಆದರೆ, ಜಮ್ಮು-ಕಾಶ್ಮೀರ ನಿವಾಸಿಗಳು ಅಲ್ಲದವರಿಗೆ ಅವಕಾಶಗಳು ಸಿಗುವಲ್ಲಿ ಸಮಾನತೆ, ರಾಜ್ಯ ಸರ್ಕಾರಿ ನೌಕರಿ ಹಾಗೂ ಭೂಮಿ ಖರೀದಿಸುವ ಹಕ್ಕುಗಳನ್ನು ಕಸಿಯುತ್ತಿತ್ತು” ಎಂದು ಹೇಳಿದರು. ಇದೇ ವೇಳೆ, “ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಪ್ರತ್ಯೇಕ ಸಂವಿಧಾನಕ್ಕಿಂತ ಭಾರತದ ಸಂವಿಧಾನ ಶ್ರೇಷ್ಠ” ಎಂಬ ಕೇಂದ್ರ ಸರ್ಕಾರದ ವಾದವನ್ನು ಕೂಡ ಅವರು ಒಪ್ಪಿದರು.
“ಸಂವಿಧಾನದ 35 ಎ ವಿಧಿಯಿಂದ ಸಂವಿಧಾನದ 16 (1) (ರಾಜ್ಯ ಸರ್ಕಾರದ ಉದ್ಯೋಗದಲ್ಲಿ ಸಮಾನ ಅವಕಾಶ), 19 (1) (ಸ್ಥಿರಾಸ್ತಿಯನ್ನು ಖರೀದಿಸುವುದು) ಹಾಗೂ 19 (1) (E) (ದೇಶದ ಯಾವುದೇ ಭಾಗದಲ್ಲಿ ನೆಲೆಸುವುದು) ವಿಧಿಗಳ ಉಲ್ಲಂಘನೆಯಾಗುತ್ತಿತ್ತು. ಇಂತಹ ಮೂಲಭೂತ ಹಕ್ಕುಗಳಿಂದ ಜನ ವಂಚಿತರಾಗುತ್ತಿದ್ದರು” ಎಂದು ಡಿ.ವೈ.ಚಂದ್ರಚೂಡ್ ಹೇಳಿದರು.
ಇದನ್ನೂ ಓದಿ: Article 370: ರಾಷ್ಟ್ರಪತಿಯವರೇ ರಾಜ್ಯದ ಸ್ಥಾನ ನೀಡಬಹುದು; ಕಾಶ್ಮೀರ ವಿಷಯದಲ್ಲಿ ಸುಪ್ರೀಂ ಮಹತ್ವದ ಪ್ರಸ್ತಾಪ
ಕೇಂದ್ರ ಸರ್ಕಾರವು 2019ರ ಆಗಸ್ಟ್ 5ರಂದು 370ನೇ ವಿಧಿ ರದ್ದುಗೊಳಿಸಿದೆ. ಇದನ್ನು ಪ್ರಶ್ನಿಸಿ 23 ಅರ್ಜಿಗಳು ಸಲ್ಲಿಕೆಯಾದ ಕಾರಣ ಎಲ್ಲ ಅರ್ಜಿಗಳ ವಿಚಾರಣೆಯನ್ನು ಪ್ರತಿದಿನ ನಡೆಸಲಾಗುತ್ತಿದೆ. ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜಯ್ ಖನ್ನಾ, ಬಿ.ಆರ್.ಗವಾಯಿ ಹಾಗೂ ಸೂರ್ಯಕಾಂತ್ ಅವರ ಪಂಚ ಸದಸ್ಯರ ಪೀಠವು ಪ್ರತಿದಿನ ವಿಚಾರಣೆ ನಡೆಸುತ್ತಿದೆ.