ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ (Article 370) ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಪ್ರತಿದಿನ ವಿಚಾರಣೆ ನಡೆಸುತ್ತಿದೆ. ಇನ್ನು ಜಮ್ಮು-ಕಾಶ್ಮೀರಕ್ಕೆ ಮರಳಿ ರಾಜ್ಯ ಸ್ಥಾನಮಾನ ನೀಡುವ ಕುರಿತು ವಾದ ಆಲಿಸಿದ ನ್ಯಾಯಾಲಯವು, “ಯಾವುದೇ ಪ್ರದೇಶಕ್ಕೆ ರಾಜ್ಯ ಸ್ಥಾನಮಾನವನ್ನು ರಾಷ್ಟ್ರಪತಿಯವರು ಮತ್ತೆ ನೀಡಬಹುದು. ಅವರನ್ನು ಸಂವಿಧಾನ ತಡೆಯುವುದಿಲ್ಲ” ಎಂದು ಸ್ಪಷ್ಟಪಡಿಸಿತು.
“ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವಾಗಲೇ ಅದನ್ನು ವಿಭಜಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ್ದು ತಪ್ಪು” ಎಂಬ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, “ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವಾಗಲೇ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ್ದು ತಪ್ಪು ಎಂದು ಹೇಳಲಾಗದು. ಆದರೆ, ರಾಷ್ಟ್ರಪತಿಯವರು ಒಂದು ರಾಜ್ಯದ ಕುರಿತು ತೀರ್ಮಾನ ತೆಗೆದುಕೊಳ್ಳುವಾಗ, ಅವರಿಗೆ ಯಾವುದೇ ಸಂವಿಧಾನದ ತೊಡಕುಗಳು ಇರುವುದಿಲ್ಲ” ಎಂದು ತಿಳಿಸಿತು.
ಅರ್ಜಿ ವಿಚಾರಣೆ ಕುರಿತು ಒಮರ್ ಅಬ್ದುಲ್ಲಾ ಪ್ರತಿಕ್ರಿಯೆ
“ಸಂವಿಧಾನದ 356 (1) (ಸಿ) ಪರಿಚ್ಛೇದದ ಅಡಿಯಲ್ಲಿ ಕ್ರಮ ತೆಗೆದುಕೊಳ್ಳುವಾಗ ಸಂವಿಧಾನದ ಮೂರು ಮತ್ತು ನಾಲ್ಕನೇ ಪರಿಚ್ಛೇದದ ಬಳಕೆಯು ಸರಿ ಎನಿಸುವುದಿಲ್ಲ. ಎರಡು ರಾಜ್ಯಗಳ ನಡುವಿನ ಬಿಕ್ಕಟ್ಟು ಶಮನಗೊಳಿಸುವುದು ಸಾಧ್ಯವೇ ಇಲ್ಲ ಎಂದಾಗ ಮಾತ್ರ ಕೇಂದ್ರ ಸರ್ಕಾರವು ಮಧ್ಯಪ್ರವೇಶ ಮಾಡಬೇಕು. ಅಷ್ಟಕ್ಕೂ, ರಾಷ್ಟ್ರಪತಿಯವರು ಒಂದು ರಾಜ್ಯದ ಸ್ಥಾನಮಾನದ ಕುರಿತು ಯಾವುದೇ ತೀರ್ಮಾನ ತೆಗೆದುಕೊಳ್ಳಬಹುದು. ಇಂತಹ ತೀರ್ಮಾನ ತೆಗೆದುಕೊಳ್ಳುವಾಗ ಅವರಿಗೆ ಸಂವಿಧಾನದ ಗಡಿ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿತು.
ಇದನ್ನೂ ಓದಿ: Article 370: ಸಂವಿಧಾನದ 370ನೇ ವಿಧಿ ರದ್ದು ಪ್ರಶ್ನಿಸಿ ಅರ್ಜಿ; ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್
ಕೇಂದ್ರ ಸರ್ಕಾರವು 2019ರ ಆಗಸ್ಟ್ 5ರಂದು 370ನೇ ವಿಧಿ ರದ್ದುಗೊಳಿಸಿದೆ. ಇದನ್ನು ಪ್ರಶ್ನಿಸಿ 23 ಅರ್ಜಿಗಳು ಸಲ್ಲಿಕೆಯಾದ ಕಾರಣ ಎಲ್ಲ ಅರ್ಜಿಗಳ ವಿಚಾರಣೆಯನ್ನು ಪ್ರತಿದಿನ ನಡೆಸಲಾಗುತ್ತಿದೆ. ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜಯ್ ಖನ್ನಾ, ಬಿ.ಆರ್.ಗವಾಯಿ ಹಾಗೂ ಸೂರ್ಯಕಾಂತ್ ಅವರ ಪಂಚ ಸದಸ್ಯರ ಪೀಠವು ವಿಚಾರಣೆ ಆರಂಭಿಸಿದೆ.