ನವದೆಹಲಿ: 370 ನೇ ವಿಧಿಯ (Article 370) ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ 70 ವರ್ಷಗಳ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕೇಂದ್ರ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಸಲ್ಲಿಸಿದ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ತನ್ನ ತೀರ್ಪನ್ನು ನೀಡಿದೆ. ಕೇಂದ್ರ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಹೇಳುವ ಮೂಲಕ ನಿರ್ಧಾರವನ್ನು ಎತ್ತಿ ಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠವು 35 ದಿನಗಳ ಅವಧಿಯಲ್ಲಿ 16 ದಿನಗಳ ಕಾಲ ವಿಚಾರಣೆ ನಡೆಸಿ ತನ್ನ ತೀರ್ಪನ್ನು ಪ್ರಕಟಿಸಿದೆ.
ಇದನ್ನೂ ಓದಿ : Article 370: ಆರ್ಟಿಕಲ್ 370 ತಾತ್ಕಾಲಿಕ, ಜಮ್ಮು ಕಾಶ್ಮೀರಕ್ಕೆ ಸಾರ್ವಭೌಮತ್ವವಿಲ್ಲ : ಸುಪ್ರೀಂ ಕೋರ್ಟ್
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರೊಂದಿಗೆ ಬರೆದ ತೀರ್ಪಿನ ಅಂಶಗಳನ್ನು ವಿವರಿಸಿದರು. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸಂಜೀವ್ ಖನ್ನಾ ಏಕಕಾಲಿಕ ತೀರ್ಪನ್ನು ಬರೆದಿದ್ದಾರೆ. ಈ ತೀರ್ಪಿನ ಪ್ರಮುಖ ಅಂಶಗಳು ಇಲ್ಲಿವೆ.
ತೀರ್ಪಿನ ಪ್ರಮುಖ ಅಂಶಗಳು ಇಲ್ಲಿವೆ
- 370 ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಕೇಂದ್ರದ 2019 ರ ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಐದು ನ್ಯಾಯಾಧೀಶರ ಪೀಠವು ಸರ್ವಾನುಮತದ ತೀರ್ಪು ನೀಡಿದೆ.
- ಈ ವಿಷಯದ ಬಗ್ಗೆ ಐದು ನ್ಯಾಯಾಧೀಶರ ಪೀಠವು ಮೂರು ತೀರ್ಪುಗಳನ್ನು ನೀಡಿದೆ ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ಅವರು ಪ್ರಕಟಿಸಿದ್ದಾರೆ.
- ಅರ್ಜಿದಾರರು ಪ್ರಶ್ನಿಸದ ಕಾರಣ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಘೋಷಣೆಯ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ
- ತೀರ್ಪನ್ನು ಓದುವ ವೇಳೆ ಮುಖ್ಯ ನ್ಯಾಯಮೂರ್ತಿ, 356 ನೇ ವಿಧಿಯಡಿ ಘೋಷಣೆಯ ಸಮಯದಲ್ಲಿ ಕೇಂದ್ರವು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ಅರ್ಜಿದಾರರ ವಾದ ಸ್ವೀಕಾರಾರ್ಹವಲ್ಲ ಎಂದು ಅಭಿಪ್ರಾಯಪಟ್ಟರು.
- ಜಮ್ಮು ಮತ್ತು ಕಾಶ್ಮೀರವು ಭಾರತಕ್ಕೆ ಸೇರಿದ ನಂತರ ಅದರ ಪ್ರತ್ಯೇಕ ಸಾರ್ವಭೌಮತ್ವ ಉಳಿಯುವುದಿಲ್ಲ.
- 1 ಮತ್ತು 370 ವಿಧಿಯಲ್ಲಿ ಹೇಳಿದಂತೆ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ.
- 370 ನೇ ವಿಧಿ ತಾತ್ಕಾಲಿಕ ವ್ಯವಸ್ಥೆಯಾಗಿದ್ದು ಸಂವಿಧಾನದ 370 ನೇ ವಿಧಿಯು ಯುದ್ಧ ಪರಿಸ್ಥಿತಿಗಳಿಗಾಗಿರುವ ಮಧ್ಯಂತರ ವ್ಯವಸ್ಥೆಯಾಗಿದೆ.
- ಸಂವಿಧಾನ ರಚನಾ ಸಭೆಯು ಜಮ್ಮು ಮತ್ತು ಕಾಶ್ಮೀರವನ್ನು ಎಂದಿಗೂ ಶಾಶ್ವತ ಸಂಸ್ಥೆಯಾಗಲು ಉದ್ದೇಶಿಸಿರಲಿಲ್ಲ. ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಸಭೆಯು ಅಸ್ತಿತ್ವದಲ್ಲಿಲ್ಲದಿರುವಾಗ, 370 ನೇ ವಿಧಿಯ ವಿಶೇಷ ಷರತ್ತು ಅಸ್ತಿತ್ವದಲ್ಲಿರುವುದಿಲ್ಲ.
- ಆರ್ಟಿಕಲ್ 370 ರದ್ದಾದ ಬಳಿಕ ಜಮ್ಮು ಕಾಶ್ಮೀರದ ಸಂವಿಧಾನವು ಕಾರ್ಯಾಚರಣೆಯಲ್ಲಿರುವುದಿಲ್ಲ ಹಾಗೂ ಅದನ್ನು ಉಳಿಸಿಕೊಳ್ಳುವುದರಲ್ಲಿ ಯಾವುದೇ ಉದ್ದೇಶವಿರುವುದಿಲ್ಲ.
- ವಿಧಾನಸಭೆಗೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ನಿರ್ದೇಶನ ನೀಡಿದ್ದು ರಾಜ್ಯ ಸ್ಥಾನಮಾನ ಸಿಗುವಂತೆ ಮಾಡಬೇಕು ಎಂದು ಹೇಳಿದೆ.
- ಭಾರತೀಯ ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುತ್ತದೆ.