ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ (Article 370) ವಿಧಿ ರದ್ದು ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆರಂಭಿಸಿದೆ. ಬುಧವಾರದಿಂದ (ಆಗಸ್ಟ್ 2) ನಿತ್ಯ ವಿಚಾರಣೆ ನಡೆಯಲಿದ್ದು, ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ವಿಚಾರಣೆ ಆರಂಭಿಸಿದೆ.
ಕೇಂದ್ರ ಸರ್ಕಾರವು 2019ರ ಆಗಸ್ಟ್ 5ರಂದು 370ನೇ ವಿಧಿ ರದ್ದುಗೊಳಿಸಿದೆ. ಇದನ್ನು ಪ್ರಶ್ನಿಸಿ 23 ಅರ್ಜಿಗಳು ಸಲ್ಲಿಕೆಯಾದ ಕಾರಣ ಎಲ್ಲ ಅರ್ಜಿಗಳ ವಿಚಾರಣೆಯನ್ನು ಪ್ರತಿದಿನ ನಡೆಸುವುದಾಗಿ ತಿಳಿಸಿದೆ. ಅದಂರತೆ, ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜಯ್ ಖನ್ನಾ, ಬಿ.ಆರ್.ಗವಾಯಿ ಹಾಗೂ ಸೂರ್ಯಕಾಂತ್ ಅವರ ಪಂಚ ಸದಸ್ಯರ ಪೀಠವು ವಿಚಾರಣೆ ಆರಂಭಿಸಿದೆ.
ವಿಧಿ ರದ್ದು ತೀರ್ಮಾನ ಪ್ರಶ್ನಿಸುವ ಜತೆಗೆ ಒಂದಷ್ಟು ಅರ್ಜಿಗಳನ್ನು ಜಮ್ಮು-ಕಾಶ್ಮೀರವನ್ನು ಎರಡು ಭಾಗಗಳಾಗಿ ವಿಂಗಡಿಸಿ, ಜಮ್ಮು-ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ ನಿರ್ಧಾರವನ್ನೂ ಪ್ರಶ್ನಿಸಿ ಸಲ್ಲಿಸಲಾಗಿದೆ. ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಅರ್ಜಿದಾರರ ಪರ ವಾದ ಮಂಡಿಸುವುದರೊಂದಿಗೆ ವಿಚಾರಣೆ ಆರಂಭವಾಗಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ಇನ್ನೆಂದೂ ಸ್ಥಾಪಿತವಾಗದು ಎಂದ ಗುಲಾಂ ನಬಿ ಆಜಾದ್
ಜಮ್ಮು ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ರದ್ದುಗೊಳಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಿರ್ಧಾರವನ್ನು ಅಫಿಡವಿಟ್‌ನಲ್ಲಿ ಸರ್ಕಾರ ಸಮರ್ಥಿಸಿಕೊಂಡಿದೆ. 370ನೇ ವಿಧಿಯ ರದ್ದತಿಯು ಭಯೋತ್ಪಾದಕರನ್ನು ಮಟ್ಟಹಾಕಲು ಕಾರಣವಾಗಿದೆ; ಕಲ್ಲು ತೂರಾಟ ಮತ್ತು ಬೀದಿ ಹಿಂಸಾಚಾರದ ಘಟನೆಗಳು ಭೂತಕಾಲದ ವಿಷಯವಾಗಿದೆ. ಈ ಪ್ರದೇಶದಲ್ಲಿ ಅಭೂತಪೂರ್ವ ಅಭಿವೃದ್ಧಿ, ಪ್ರಗತಿ, ಭದ್ರತೆ ಮತ್ತು ಸ್ಥಿರತೆಗೆ ಕಾರಣವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.