ಚೆನ್ನೈ: ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಾವಿನ ಸಂದರ್ಭದ ಕುರಿತು ತನಿಖೆ ನಡೆಸಿದ್ದ ಆರ್ಮುಘಸ್ವಾಮಿ ಕಮಿಷನ್ (Arumughaswamy Commission) ವರದಿಯನ್ನು ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ. 2016ರಲ್ಲಿ ಜಯಲಲಿತಾ ಅವರು ನಿಧನರಾಗಿದ್ದರು. ಅವರ ಸಾವಿನ ಪರಿಸ್ಥಿತಿಯ ಕುರಿತು ತನಿಖೆ ನಡೆಸುವಂತೆ ಒತ್ತಾಯ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎ ಆರ್ಮುಘಸ್ವಾಮಿ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗ ನೀಡಿದ್ದ ವರದಿಯನ್ನು ಸ್ವೀಕರಿಸಿದ್ದ ಸರ್ಕಾರ ಇದೀಗ ವಿಧಾನಸಭೆಯಲ್ಲಿ ಮಂಡಿಸಿದೆ. ಜಯಲಲಿತಾ ಅವರು ಆಪ್ತೆ ವಿ ಶಶಿಕಲಾ ಅವರನ್ನು ತಪ್ಪಿತಸ್ಥೆ ಎಂದು ನಮೂದಿಸಿರುವ ಆಯೋಗವು ಅವರ ವಿರುದ್ಧ ಹೆಚ್ಚಿನ ತನಿಖೆಗೆ ಶಿಫಾರಸು ಮಾಡಿದೆ. ಇದೇ ವೇಳೆ, ಶಶಿಕಲಾ ಜತೆ ಇನ್ನೂ ಹಲವರನ್ನು ತಪ್ಪಿತಸ್ಥರು ಎಂದು ಹೆಸರಿಸಿದೆ
ಜಯಲಲಿತಾ ಅವರ ಸಾವು, ಸಾವಿನ ಸಂದರ್ಭ, ಆರೋಗ್ಯ ಸ್ಥಿತಿ, ಆಸ್ಪತ್ರೆಗೆ ದಾಖಲಿಸಲು ಉಂಟಾದ ಪರಿಸ್ಥಿತಿ ಸೇರಿದಂತೆ ಇನ್ನಿತರ ಎಲ್ಲ ಸಂಗತಿಗಳ ಬಗ್ಗೆ ತನಿಖೆಗೆ ಅಂದಿನ ಮುಖ್ಯಮಂತ್ರಿ ಒ ಪನ್ನೀರ್‌ಸೆಲ್ವಮ್ ಅವರು 2017ರಲ್ಲಿ ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್ಮುಘಸ್ವಾಮಿ ಏಕ ಸದಸ್ಯ ಆಯೋಗವನ್ನು ರಚಿಸಿತ್ತು.
ಆಗಸ್ಟ್ 27ರಂದೇ ಆರ್ಮುಘಸ್ವಾಮಿ ಆಯೋಗವು ತಮಿಳು ಭಾಷೆಯಲ್ಲಿ 608 ಪುಟಗಳ ಹಾಗೂ ಇಂಗ್ಲಿಷ್ ಭಾಷೆಯಲ್ಲಿ 500 ಪುಟಗಳ ಅಂತಿಮ ವರದಿಯನ್ನು ಹಾಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಸಲ್ಲಿಸಿತ್ತು. ಆಯೋಗವು ಸುಮಾರು 159 ಸಾಕ್ಷಿದಾರರನ್ನು ಮಾತನಾಡಿಸಿದೆ. ಅವರು ನೀಡಿದ ಅಭಿಪ್ರಾಯಗಳ್ನು ಆಧರಿಸಿ ಆಯೋಗವು ಈ ವರದಿಯನ್ನು ಸಿದ್ಧಪಡಿಸಿದೆ.
ಇದನ್ನೂ ಓದಿ | 26 ವರ್ಷಗಳಿಂದಲೂ ಕೊಳೆಯುತ್ತಿದೆ ಜಯಲಲಿತಾ ಅಕ್ರಮ ಆಸ್ತಿ : ಹರಾಜು ಹಾಕಲಿದೆಯಾ ಸರ್ಕಾರ