Site icon Vistara News

Arvind Kejriwal: ಅರವಿಂದ್‌ ಕೇಜ್ರಿವಾಲ್‌ ಉದ್ದೇಶಪೂರ್ವಕವಾಗಿ ಸಮನ್ಸ್‌ಗೆ ಉತ್ತರಿಸಿಲ್ಲ; ಕೋರ್ಟ್‌ಗೆ ವಿಶೇಷ ಅರ್ಜಿ ಸಲ್ಲಿಸಿದ ಇ.ಡಿ

aravind

aravind

ನವದೆಹಲಿ: ಆಮ್‌ ಆದ್ಮಿ ಪಾರ್ಟಿ (AAP) ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಮತ್ತು ಜಾರಿ ನಿರ್ದೇಶನಾಲಯ (Enforcement Directorate-E.D.) ನಡುವಿನ ಸಂಘರ್ಷ ಮುಂದುವರಿದೆ. ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ (Excise Policy Case) ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನೀಡಿದ ಆರನೇ ಸಮನ್ಸ್‌ಗೂ ಅರವಿಂದ್‌ ಕೇಜ್ರಿವಾಲ್‌ ಉತ್ತರಿಸಿಲ್ಲ. ʼʼಅರವಿಂದ್ ಕೇಜ್ರಿವಾಲ್ ಅವರು ಉದ್ದೇಶಪೂರ್ವಕವಾಗಿ ಸಮನ್ಸ್‌ಗೆ ಉತ್ತರಿಸಿಲ್ಲ. ಬೇಕಂತಲೇ ವಿಚಾರಣೆಯನ್ನು ತಪ್ಪಿಸಿದ್ದಾರೆ. ಸಮನ್ಸ್‌ಗೆ ಹಾಜರಾಗುವ ಬದಲು ಕ್ಷುಲ್ಲಕ ಕಾರಣಗಳನ್ನು ನೀಡಿದ್ದಾರೆʼʼ ಎಂದು ಇಡಿ ನ್ಯಾಯಾಲಯಕ್ಕೆ ಸಲ್ಲಿಸಿದ ವಿಶೇಷ ಅರ್ಜಿಯಲ್ಲಿ ತಿಳಿಸಿದೆ.

ಇಡಿ ಹೇಳಿದ್ದೇನು?

ಮುಖ್ಯಮಂತ್ರಿ ಉದ್ದೇಶಪೂರ್ವಕವಾಗಿ ವಿಚಾರಣೆಗೆ ಹಾಜರಾಗುತ್ತಿಲ್ಲ. ಕುಂಟ ನೆಪಗಳನ್ನು ನೀಡುತ್ತಲೇ ಬಂದಿದ್ದಾರೆ ಎಂದು ಇಡಿ ಹೇಳಿದೆ. ಮದ್ಯ ನೀತಿ ಹಗರಣದಲ್ಲಿ ಕೇಜ್ರಿವಾಲ್ ಅವರನ್ನು ‘ಆರೋಪಿ’ ಎಂದು ಕರೆದಿರುವ ಇಡಿ ತನ್ನ ಅರ್ಜಿಯಲ್ಲಿ, ʼʼಆರೋಪಿಯಾಗಿರುವ ಅರವಿಂದ್ ಕೇಜ್ರಿವಾಲ್ ನೀಡಿದ ಉತ್ತರಗಳಿಂದ ಸಮನ್ಸ್ ಅನ್ನು ಉಲ್ಲಂಘಿಸುವುದು ಮತ್ತು ವಿಚಾರಣೆಗೆ ಅಸಹಕರಿಸುತ್ತಿರುವುದು ಸ್ಪಷ್ಟವಾಗಿದೆ. ಸಮನ್ಸ್‌ಗಳನ್ನು ಉದ್ದೇಶಪೂರ್ವಕವಾಗಿ ತಪ್ಪಿಸುವ ಮೂಲಕ ಐಪಿಸಿಯ ಸೆಕ್ಷನ್ 174ರ ಅಡಿಯಲ್ಲಿ ಅಪರಾಧ ಎಸಗಿದ್ದಾರೆ” ಎಂದು ಅದು ಹೇಳಿದೆ.

ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರಿಗೆ ಸತತ ಸಮನ್ಸ್‌ ಕಳುಹಿಸಿದ್ದರೂ ಉತ್ತರಿಸದ ಹಿನ್ನೆಲೆಯಲ್ಲಿ ಇಡಿ ಇದೇ ರೀತಿಯ ಪ್ರಕರಣ ದಾಖಲಿಸಿದೆ.

ಏನಿದು ಪ್ರಕರಣ?

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಅದಕ್ಕಾಗಿ ಲಂಚ ನೀಡಲಾಗಿದೆ ಎನ್ನುವ ಆರೋಪವಿದೆ. ಇದನ್ನು ಎಎಪಿ ಪದೇಪದೆ ನಿರಾಕರಿಸುತ್ತಲೇ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸೇರಿ ಹಲವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Arvind Kejriwal: 6ನೇ ಬಾರಿಗೂ ಇ.ಡಿ ಸಮನ್ಸ್‌ಗೆ ಕ್ಯಾರೇ ಎನ್ನದ ಕೇಜ್ರಿವಾಲ್;‌ ಈ ಸಲ ಅರೆಸ್ಟ್?

ಈ ಮಧ್ಯೆ ಸಮನ್ಸ್ ಅನ್ನು ʼಕಾನೂನುಬಾಹಿರʼ ಎಂದು ಕರೆದ ಕೇಜ್ರಿವಾಲ್ ಅವುಗಳ ಕಾನೂನು ಸಿಂಧುತ್ವವನ್ನು ನ್ಯಾಯಾಲಯವು ನಿರ್ಧರಿಸಲಿದೆ ಎಂದು ಹೇಳಿದ್ದಾರೆ. ʼʼಅರವಿಂದ್‌ ಕೇಜ್ರಿವಾಲ್‌ ಅವರಿಗೆ ಇಡಿ ನೀಡಿದ ಸಮನ್ಸ್‌ ಕಾನೂನುಬಾಹಿರವಾಗಿದೆ. ಅಲ್ಲದೆ, ಪ್ರಕರಣವು ನ್ಯಾಯಾಲಯದಲ್ಲಿದೆ. ಪದೇಪದೆ ಸಮನ್ಸ್‌ ಜಾರಿಗೊಳಿಸುವ ಬದಲು ಇ.ಡಿ ಅಧಿಕಾರಿಗಳು ನ್ಯಾಯಾಲಯದ ಆದೇಶದವರೆಗೆ ಕಾಯಬೇಕು” ಎಂದು ಆಮ್‌ ಆದ್ಮಿ ಪಕ್ಷದ ಪ್ರಕಟಣೆ ತಿಳಿಸಿದೆ. ಜತೆಗೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಹೇಳಿದೆ. ಪದೇಪದೆ ಸಮನ್ಸ್‌ ನೀಡಿದರೂ ಕೇಜ್ರಿವಾಲ್‌ ಅವರು ವಿಚಾರಣೆಗೆ ಹಾಜರಾಗದ ಕಾರಣ ಇಡಿ ಕೂಡ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version