Site icon Vistara News

Arvind Kejriwal: ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ಅರವಿಂದ್ ಕೇಜ್ರಿವಾಲ್

aravind

aravind

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಇಂದು (ಫೆಬ್ರವರಿ 17) ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ. ಈ ಮಧ್ಯೆ ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ (Delhi liquor policy scam) ಸಂಬಂಧಿಸಿದಂತೆ ದೆಹಲಿ ರೂಸ್ ಅವೆನ್ಯೂ ನ್ಯಾಯಾಲಯದ ವಿಚಾರಣೆಗೆ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾರೆ. ʼʼದೆಹಲಿಯಲ್ಲಿ ವಿಧಾನಸಭೆ ಕಲಾಪ ನಡೆಯುತ್ತಿದ್ದು, ಇಂದು ವಿಶ್ವಾಸ ಮತಯಾಚನೆ ನಡೆಯಲಿದೆ. ಆ ಕಾರಣದಿಂದ ಕೇಜ್ರಿವಾಲ್ ಸದನದಲ್ಲಿ ಹಾಜರಿರಬೇಕು. ಅದಕ್ಕಾಗಿ ಕೋರ್ಟ್​​ ವಿಚಾರಣೆಗೆ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುತ್ತಿದ್ದಾರೆʼʼ ಎಂದು ಕೇಜ್ರಿವಾಲ್​​​ ಪರ ವಕೀಲರು ಹೇಳಿದ್ದರು.

ಈ ಹಿಂದೆ ನೀಡಿದ ಆರು ಸಮನ್ಸ್​​​ಗೆ ಉತ್ತರ ನೀಡದ ಕೇಜ್ರಿವಾಲ್​​​ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಕೋರ್ಟ್​​ ಮೆಟ್ಟಿಲೇರಿತ್ತು. ಕೋರ್ಟ್​ ಈ ದೂರಿನ ಆಧಾರದ ಮೇಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​​ ನೀಡಿತ್ತು. ಸದ್ಯ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮಾರ್ಚ್ 16ಕ್ಕೆ ನಿಗದಿಪಡಿಸಿದೆ.

ಇಂದು ವಿಶ್ವಾಸಮತ ಯಾಚನೆ

ಎಎಪಿ ಶಾಸಕರನ್ನು ಬಿಜೆಪಿ ಬೇಟೆಯಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಇಂದು ವಿಶ್ವಾಸ ಮತ ಯಾಚಿಸಲಿದ್ದಾರೆ. 70 ಸದಸ್ಯರ ವಿಧಾನಸಭೆಯಲ್ಲಿ 62 ಶಾಸಕರನ್ನು ಹೊಂದಿರುವ ಆಮ್ ಆದ್ಮಿ ಪಕ್ಷ ವಿಶ್ವಾಸ ಮತ ಯಾಚಿಸುತ್ತಿರುವುದು ಇದು ಎರಡನೇ ಬಾರಿ.

ಶುಕ್ರವಾರ ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯವನ್ನು ಮಂಡಿಸಿದ ಕೇಜ್ರಿವಾಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ʼʼಇಬ್ಬರು ಎಎಪಿ ಶಾಸಕರು ತಮ್ಮನ್ನು ಬಿಜೆಪಿ ಸದಸ್ಯರು ಸಂಪರ್ಕಿಸಿದ್ದಾರೆ ಎಂದು ನನ್ನ ಬಳಿ ಹೇಳಿಕೊಂಡಿದ್ದಾರೆ. ನನ್ನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಬಿಜೆಪಿಯವರು ನಮ್ಮ ಶಾಸಕರ ಬಳಿ ತಿಳಿಸಿದ್ದಾರೆʼʼ ಎಂದು ಕೇಜ್ರಿವಾಲ್‌ ಆರೋಪಿಸಿದ್ದಾರೆ.

“ಎಎಪಿಯ 21 ಶಾಸಕರು ಪಕ್ಷವನ್ನು ತೊರೆಯಲು ಒಪ್ಪಿಕೊಂಡಿದ್ದಾರೆ ಮತ್ತು ಹೆಚ್ಚಿನವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಶಾಸಕರಿಗೆ ತಿಳಿಸಲಾಗಿದೆ. ಅಲ್ಲದೆ ಅವರು ಬಿಜೆಪಿಗೆ ಸೇರಲು ಶಾಸಕರಿಗೆ 25 ಕೋಟಿ ರೂ. ಆಫರ್ ನೀಡಿದ್ದಾರೆ. ಆದರೆ ನಮ್ಮ ಶಾಸಕರು ಇದನ್ನು ಒಪ್ಪಿಲ್ಲ. ಬಿಜೆಪಿಯವರು ಮತ್ತೊಂದು ಆಪರೇಷನ್ ಕಮಲ ನಡೆಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ. “ನಮ್ಮ ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ. ಎಲ್ಲರೂ ನಮ್ಮೊಂದಿಗೆ ದೃಢವಾಗಿ ನಿಲ್ಲುತ್ತಾರೆ ಎಂಬುದನ್ನು ನಾನು ಸಾಬೀತುಪಡಿಸುತ್ತೇನೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Arvind Kejriwal: ಅರವಿಂದ್ ಕೇಜ್ರಿವಾಲ್‌ಗೆ 5ನೇ ಬಾರಿ ಇ.ಡಿ. ಸಮನ್ಸ್!

ಏನಿದು ದಿಲ್ಲಿ ಅಬಕಾರಿ ನೀತಿ ಹಗರಣ?

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇಕಡಾ 5ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಅದಕ್ಕಾಗಿ ಲಂಚ ನೀಡಲಾಗಿದೆ ಎನ್ನುವ ಆರೋಪವಿದೆ. ಇದನ್ನು ಎಎಪಿ ಪದೇ ಪದೆ ನಿರಾಕರಿಸುತ್ತಲೇ ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೆಹಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾರುವಂತೆ ಕೇಜ್ರಿವಾಲ್‌ ಅವರಿಗೆ ಇಡಿ ಸಮನ್ಸ್‌ ಕಳುಹಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version