Site icon Vistara News

Arvind Kejriwal: ಕೇಜ್ರಿವಾಲ್ ತನಿಖೆಗೆ ಸಹಕರಿಸುತ್ತಿಲ್ಲ; ಮೊಬೈಲ್‌ ಫೋನ್‌ನ ಪಾಸ್‌ವರ್ಡ್‌ ಕೂಡ ನೀಡುತ್ತಿಲ್ಲ ಎಂದ ಇ.ಡಿ

Arvind Kejriwal

Arvind Kejriwal

ನವದೆಹಲಿ: ದೆಹಲಿ ಅಬಕಾರಿ ನೀತಿಗೆ (Delhi excise policy) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಏಪ್ರಿಲ್ 1ರಂದು ಜಾರಿ ನಿರ್ದೇಶನಾಲಯ(Enforcement Directorate)ದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಎಸ್‌.ವಿ.ರಾಜು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ʼʼಅರವಿಂದ್ ಕೇಜ್ರಿವಾಲ್ ಅವರ ನಡವಳಿಕೆಯು ಸಂಪೂರ್ಣವಾಗಿ ಅಸಹಕಾರದಿಂದ ಕೂಡಿದೆ ಮತ್ತು ಅವರು ವಿಚಾರಣೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಎಎಪಿಯ ಮಾಜಿ ಸಂವಹನ ಉಸ್ತುವಾರಿ ಮತ್ತು ದೆಹಲಿ ಅಬಕಾರಿ ನೀತಿ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ವಿಜಯ್ ನಾಯರ್ ನನಗೆ ವರದಿ ಮಾಡುತ್ತಿರಲಿಲ್ಲ. ಸಚಿವೆ ಅತಿಶಿ ಅವರಿಗೆ ವರದಿ ಮಾಡುತ್ತಿದ್ದರು ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ಜತೆಗೆ ಕೇಜ್ರಿವಾಲ್ ತಮ್ಮ ಮೊಬೈಲ್‌ ಫೋನ್‌ನ ಪಾಸ್‌ವರ್ಡ್‌ ತಿಳಿಸುತ್ತಿಲ್ಲʼʼ ಎಂದೂ ಎಸ್‌.ವಿ.ರಾಜು ಹೇಳಿದ್ದಾರೆ.

ವಿಚಾರಣೆ ವೇಳೆ ಆಮ್ ಆದ್ಮಿ ಪಕ್ಷದ ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ನ್ಯಾಯಾಲಯದಲ್ಲಿ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಮನವಿ ಸಲ್ಲಿಕೆ

ಈತನ್ಮಧ್ಯೆ, ಅರವಿಂದ್ ಕೇಜ್ರಿವಾಲ್ ಅವರ ವಕೀಲರು, ಕೇಜ್ರಿವಾಲ್ ಅವರಿಗೆ ಜೈಲಿನೊಳಗೆ ಮೂರು ಪುಸ್ತಕಗಳನ್ನು ಓದಲು ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಭಗವದ್ಗೀತೆ, ರಾಮಾಯಣ ಮತ್ತು ಹೌ ಪ್ರೈಮ್‌ ಮಿನಿಸ್ಟರ್ಸ್‌ ಡಿಸೈಡ್‌ (How Prime Ministers Decide) ಪುಸ್ತಕಕ್ಕಾಗಿ ಮನವಿ ಸಲ್ಲಿಸಲಾಗಿದೆ. ಜತೆಗೆ ವಿಶೇಷ ಆಹಾರಕ್ಕಾಗಿ ಮತ್ತು ಧಾರ್ಮಿಕ ಲಾಕೆಟ್ ಹೊಂದಲು ಅನುಮತಿ ಕೋರಿದ್ದಾರೆ.

ಕೇಜ್ರಿವಾಲ್‌ಗೆ ಇನ್ನೂ 15 ದಿನ ಜೈಲು ಫಿಕ್ಸ್

ಅರವಿಂದ್‌ ಕೇಜ್ರಿವಾಲ್‌ ಅವರನ್ನು ಏಪ್ರಿಲ್‌ 15ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ದೆಹಲಿಯ ರೋಸ್‌ ಅವೆನ್ಯೂ ಕೋರ್ಟ್‌ ಏಪ್ರಿಲ್‌ 1ರಂದು ಆದೇಶ ಹೊರಡಿಸಿದೆ. ಇದರಿಂದಾಗಿ ಇನ್ನೂ 15 ದಿನ ಕೇಜ್ರಿವಾಲ್‌ ಅವರು ಕಸ್ಟಡಿಯಲ್ಲಿಯೇ ಕಾಲ ಕಳೆಯಬೇಕಾಗಿದೆ. ಕೋರ್ಟ್‌ ಆದೇಶದ ಬಳಿಕ ಅರವಿಂದ್‌ ಕೇಜ್ರಿವಾಲ್‌ ಅವರನ್ನು ತಿಹಾರ್‌ ಜೈಲಿಗೆ ಶಿಫ್ಟ್‌ ಮಾಡಲಾಗಿದೆ.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ಗೆ ತಪ್ಪದ ಸಂಕಷ್ಟ; ಇನ್ನೂ 15 ದಿನ ಜೈಲು ಫಿಕ್ಸ್!

ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಕಸ್ಟಡಿಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಅವರನ್ನು ಏಪ್ರಿಲ್‌ 1ರಂದು ರೋಸ್‌ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನೂರಾರು ಕೋಟಿ ರೂ. ಹಗರಣದ ಕುರಿತು ಇನ್ನೂ ಹೆಚ್ಚಿನ ವಿಚಾರಣೆಯ ಅಗತ್ಯವಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿದರು. ಇ.ಡಿ ಪರ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಅವರಿಗೆ ಏಪ್ರಿಲ್‌ 15ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿತು. ಇದರಿಂದಾಗಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ಅರವಿಂದ್‌ ಕೇಜ್ರಿವಾಲ್‌ ಅವರ ಬಂಧನ ಖಂಡಿಸಿ ಭಾನುವಾರ (ಮಾರ್ಚ್‌ 31) ದೆಹಲಿಯಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ. ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version