ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ (Delhi Liquor scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(Enforcement Directorate) ನೀಡಿದ ಎಂಟನೇ ಸಮನ್ಸ್ (Summons) ಅನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಸೋಮವಾರ ತಪ್ಪಿಸಿಕೊಂಡಿದ್ದಾರೆ. ಮಾರ್ಚ್ 12ರ ನಂತರ ವಿಚಾರಣೆಗೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆ.
ಕೇಜ್ರಿವಾಲ್ ಅವರು ಮಾರ್ಚ್ 12ರ ಬಳಿಕ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (AAP) ತಿಳಿಸಿದೆ. ಆದರೆ ತನಿಖಾ ಸಂಸ್ಥೆ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ನೇರವಾಗಿ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸೂಚಿಸಿದೆ. ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಅವಕಾಶವಿಲ್ಲ ಎಂದು ಇ.ಡಿ ಹೇಳಿದೆ.
ಫೆಬ್ರವರಿ 27ರಂದು ಜಾರಿ ನಿರ್ದೇಶನಾಲಯವು ತನ್ನ ಎಂಟನೇ ಸಮನ್ಸ್ ಹೊರಡಿಸಿ, ಇಂದು (ಮಾರ್ಚ್ 4) ಕೇಜ್ರಿವಾಲ್ ಅವರು ಏಜೆನ್ಸಿಯ ಪ್ರಧಾನ ಕಚೇರಿಯಲ್ಲಿ ಹಾಜರಾಗುವಂತೆ ಕೋರಿತ್ತು. ಏತನ್ಮಧ್ಯೆ ಎಎಪಿ ನೇತೃತ್ವದ ದೆಹಲಿ ಸರ್ಕಾರ ಇಂದು 2024-25ರ ಹಣಕಾಸು ವರ್ಷದ 10ನೇ ಬಜೆಟ್ ಮಂಡಿಸಲು ಸಜ್ಜಾಗಿದೆ. ಫೆಬ್ರವರಿ 15ರಂದು ಪ್ರಾರಂಭವಾದ ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನವು ಮಾರ್ಚ್ 8ರ ವರೆಗೆ ನಡೆಯಲಿದೆ. ಫೆಬ್ರವರಿ 21ರಂದು ಕೊನೆಗೊಳ್ಳಬೇಕಿದ್ದ ಅಧಿವೇಶನವನ್ನು ಬಳಿಕ ವಿಸ್ತರಿಲಾಗಿತ್ತು. ಎಎಪಿ ಸರ್ಕಾರದ ಆಡಳಿತದ ಸುದೀರ್ಘ ವಿಧಾನಸಭಾ ಅಧಿವೇಶನ ಇದಾಗಿದೆ.
2021-22ರ ಹಣಕಾಸು ವರ್ಷದ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ಅನ್ನು ʼʼಕಾನೂನು ಬಾಹಿರʼʼ ಎಂದು ಕರೆದು ಕೇಜ್ರಿವಾಲ್ ವಿಚಾರಣೆ ತಪ್ಪಿಸಿಕೊಂಡಿದ್ದಾರೆ. ಇದೀಗ ಕೊನೆಗೂ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಒಪ್ಪಿಕೊಂಡಿದ್ದಾರೆ.
ಏನಿದು ದಿಲ್ಲಿ ಅಬಕಾರಿ ನೀತಿ ಹಗರಣ?
ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇಕಡಾ 5ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಅದಕ್ಕಾಗಿ ಲಂಚ ನೀಡಲಾಗಿದೆ ಎನ್ನುವ ಆರೋಪವಿದೆ. ಇದನ್ನು ಎಎಪಿ ಪದೇ ಪದೆ ನಿರಾಕರಿಸುತ್ತಲೇ ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೆಹಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿತ್ತು.
ಎಪಿಪಿ ಹೇಳೋದೇನು?
ಸಮನ್ಸ್ ಅನ್ನು ʼಕಾನೂನುಬಾಹಿರʼ ಎಂದು ಕರೆದ ಕೇಜ್ರಿವಾಲ್ ಅವುಗಳ ಕಾನೂನು ಸಿಂಧುತ್ವವನ್ನು ನ್ಯಾಯಾಲಯವು ನಿರ್ಧರಿಸಲಿದೆ ಎಂದು ಹೇಳಿದ್ದಾರೆ. ʼʼಅರವಿಂದ್ ಕೇಜ್ರಿವಾಲ್ ಅವರಿಗೆ ಇಡಿ ನೀಡಿದ ಸಮನ್ಸ್ ಕಾನೂನುಬಾಹಿರವಾಗಿದೆ. ಅಲ್ಲದೆ, ಪ್ರಕರಣವು ನ್ಯಾಯಾಲಯದಲ್ಲಿದೆ. ಪದೇಪದೆ ಸಮನ್ಸ್ ಜಾರಿಗೊಳಿಸುವ ಬದಲು ಇ.ಡಿ ಅಧಿಕಾರಿಗಳು ನ್ಯಾಯಾಲಯದ ಆದೇಶದವರೆಗೆ ಕಾಯಬೇಕು” ಎಂದು ಆಮ್ ಆದ್ಮಿ ಪಕ್ಷದ ಪ್ರಕಟಣೆ ತಿಳಿಸಿದೆ. ಜತೆಗೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಹೇಳಿದೆ. ಪದೇಪದೆ ಸಮನ್ಸ್ ನೀಡಿದರೂ ಕೇಜ್ರಿವಾಲ್ ಅವರು ವಿಚಾರಣೆಗೆ ಹಾಜರಾಗದ ಕಾರಣ ಇ.ಡಿ ಕೂಡ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ