ನವದೆಹಲಿ: ಎಎಪಿ ಶಾಸಕರನ್ನು ಬಿಜೆಪಿ ಬೇಟೆಯಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಇಂದು (ಫೆಬ್ರವರಿ 17) ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ. ಕೇಜ್ರಿವಾಲ್ ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲು ನಿರ್ಣಯವನ್ನು ಮಂಡಿಸಿದ್ದರು (Motion of confidence). ಈ ಮಧ್ಯೆ, ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ (Delhi liquor policy scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು 6ನೇ ಬಾರಿಗೆ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಈ ಹಿಂದೆ ಐದು ಬಾರಿ ಸಮನ್ಸ್ ಜಾರಿ ಮಾಡಿದ್ದರೂ, ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಿಲ್ಲ.
ಆಮ್ ಆದ್ಮಿ ಪಕ್ಷ(APP)ದ ಮುಖ್ಯಸ್ಥರೂ ಆಗಿರುವ ಅರವಿಂದ್ ಕೇಜ್ರಿವಾಲ್ ಅವರು ಇಂದು ದೆಹಲಿ ನ್ಯಾಯಾಲಯಕ್ಕೆ ಹಾಜರಾಗಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹೊರಡಿಸಿದ ಐದು ಸಮನ್ಸ್‌ಗಳನ್ನು ಏಕೆ ತಪ್ಪಿಸಿಕೊಂಡಿದ್ದಾರೆ ಎಂದು ವಿವರಿಸುವ ಸಾಧ್ಯತೆಯಿದೆ.
विधानसभा में आज मैं विश्वास मत रखूँगा।
— Arvind Kejriwal (@ArvindKejriwal) February 16, 2024
ಬಿಜೆಪಿ ವಿರುದ್ಧ ಗಂಭೀರ ಆರೋಪ
ಶುಕ್ರವಾರ ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯವನ್ನು ಮಂಡಿಸಿದ ಕೇಜ್ರಿವಾಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ʼʼಇಬ್ಬರು ಎಎಪಿ ಶಾಸಕರು ತಮ್ಮನ್ನು ಬಿಜೆಪಿ ಸದಸ್ಯರು ಸಂಪರ್ಕಿಸಿದ್ದಾರೆ ಎಂದು ನನ್ನ ಬಳಿ ಹೇಳಿಕೊಂಡಿದ್ದಾರೆ. ನನ್ನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಬಿಜೆಪಿಯವರು ನಮ್ಮ ಶಾಸಕರ ಬಳಿ ತಿಳಿಸಿದ್ದಾರೆʼʼ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
“ಎಎಪಿಯ 21 ಶಾಸಕರು ಪಕ್ಷವನ್ನು ತೊರೆಯಲು ಒಪ್ಪಿಕೊಂಡಿದ್ದಾರೆ ಮತ್ತು ಹೆಚ್ಚಿನವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಶಾಸಕರಿಗೆ ತಿಳಿಸಲಾಗಿದೆ. ಅಲ್ಲದೆ ಅವರು ಬಿಜೆಪಿಗೆ ಸೇರಲು ಶಾಸಕರಿಗೆ 25 ಕೋಟಿ ರೂ. ಆಫರ್ ನೀಡಿದ್ದಾರೆ. ಆದರೆ ನಮ್ಮ ಶಾಸಕರು ಇದನ್ನು ಒಪ್ಪಿಲ್ಲ. ಬಿಜೆಪಿಯವರು ಮತ್ತೊಂದು ಆಪರೇಷನ್ ಕಮಲ ನಡೆಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ. “ನಮ್ಮ ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ. ಎಲ್ಲರೂ ನಮ್ಮೊಂದಿಗೆ ದೃಢವಾಗಿ ನಿಲ್ಲುತ್ತಾರೆ ಎಂಬುದನ್ನು ನಾನು ಸಾಬೀತುಪಡಿಸುತ್ತೇನೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎರಡನೇ ಬಾರಿ
ಅರವಿಂದ್ ಕೇಜ್ರಿವಾಲ್ ಸರ್ಕಾರ ವಿಶ್ವಾಸಮತ ಯಾಚಿಸುತ್ತಿರುವುದು ಇದು ಎರಡನೇ ಬಾರಿ. 70 ಸದಸ್ಯರ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 62 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 8 ಶಾಸಕರನ್ನು ಹೊಂದಿದೆ.
ಇದನ್ನೂ ಓದಿ: Delhi CM: ವಿಶ್ವಾಸ ಮತಯಾಚನೆಗೆ ಮುಂದಾದ ದಿಲ್ಲಿ ಸಿಎಂ ಕೇಜ್ರಿವಾಲ್! ಕಾರಣ ಏನು?
ಇದರ ಜತೆಗೆ ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಕೇಜ್ರಿವಾಲ್ ಸಮನ್ಸ್ ನಿರಾಕರಿಸುತ್ತಿರುವ ಬಗ್ಗೆ ಇಡಿ ಸಲ್ಲಿಸಿದ ದೂರಿನ ಮೇರೆಗೆ ಫೆಬ್ರವರಿ 17ರಂದು ತನ್ನ ಮುಂದೆ ಹಾಜರಾಗುವಂತೆ ದೆಹಲಿ ನ್ಯಾಯಾಲಯವು ಕೇಜ್ರಿವಾಲ್ ಅವರಿಗೆ ಸೂಚಿಸಿದೆ. ದೆಹಲಿ ಮುಖ್ಯಮಂತ್ರಿ ಉದ್ದೇಶಪೂರ್ವಕವಾಗಿ ಸಮನ್ಸ್‌ಗಳನ್ನು ಪಾಲಿಸಲು ಬಯಸುವುದಿಲ್ಲ ಮತ್ತು “ಕುಂಟು ನೆಪಗಳನ್ನು” ನೀಡುತ್ತಿದ್ದಾರೆ ಎಂದು ಇಡಿ ತನ್ನ ದೂರಿನಲ್ಲಿ ಆರೋಪಿಸಿದೆ. ಅವರಂತಹ ಉನ್ನತ ಶ್ರೇಣಿಯ ಸಾರ್ವಜನಿಕ ಕಾರ್ಯನಿರ್ವಾಹಕರು ಕಾನೂನಿಗೆ ಅವಿಧೇಯರಾದರೆ, ಅದು “ಸಾಮಾನ್ಯ ಜನರಿಗೆ ಅಂದರೆ ಆಮ್ ಆದ್ಮಿಗೆ ತಪ್ಪು ಉದಾಹರಣೆಯಾಗುತ್ತದೆ” ಎಂದು ಸಂಸ್ಥೆ ಹೇಳಿದೆ. ಹೀಗಾಗಿ ಕೇಜ್ರವಾಲ್ ಅವರ ಇಂದಿನ ನಡೆ ಕುತೂಹಲ ಕೆರಳಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ