ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಬಿಡುವಿಲ್ಲದ ಕಾರ್ಯದ ಒತ್ತಡದ ಮಧ್ಯೆಯೂ ಆಗಾಗ ಧ್ಯಾನ (Arvind Kejriwal Meditation) ಮಾಡುತ್ತಾರೆ. ಕಳೆದ ಡಿಸೆಂಬರ್‌ನಲ್ಲಿ ಕೇಜ್ರಿವಾಲ್ ಅವರು ಒಂದು ವಾರ ವಿಪಶ್ಯನ ಧ್ಯಾನ ಮಾಡಿದ್ದರು. ಆ ಮೂಲಕ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸಿದ್ದರು. ಈಗ ಮತ್ತೊಮ್ಮೆ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ 7 ಗಂಟೆ ಧ್ಯಾನ ಮಾಡಿದ್ದಾರೆ.
ಹೋಳಿ ಹಬ್ಬದ ದಿನವಾದ ಬುಧವಾರ ಬೆಳಗ್ಗೆ 10 ಗಂಟೆಯಿಂದ ಸತತವಾಗಿ ಏಳು ಗಂಟೆ ಅವರು ಧ್ಯಾನ ಮಾಡಿದ್ದಾರೆ. ‘ದೇಶಕ್ಕಾಗಿ ಪ್ರಾರ್ಥನೆʼ ಎಂಬ ಧ್ಯೇಯೋದ್ದೇಶದಿಂದ ಕೇಜ್ರಿವಾಲ್ ಅವರು ಧ್ಯಾನ ಮಾಡಿದ್ದಾರೆ. ಅಬಕಾರಿ ನೀತಿ ಜಾರಿ ವೇಳೆ ಅಕ್ರಮದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹಾಗೂ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ಸತ್ಯೇಂದರ್ ಜೈನ್ ಅವರನ್ನು ಬಂಧಿಸಿದ ಕಾರಣ, ಹೋಳಿ ಹಬ್ಬದ ಆಚರಣೆ ತೊರೆದು, ಕೇಜ್ರಿವಾಲ್ ಧ್ಯಾನ ಮಾಡಿದ್ದಾರೆ.
ಧ್ಯಾನ ಆರಂಭಿಸುವ ಮೊದಲು ಅರವಿಂದ್ ಕೇಜ್ರಿವಾಲ್ ಅವರು ರಾಜ್ ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿ ಅವರಿಗೆ ಗೌರವ ನಮನ ಸಲ್ಲಿಸಿದರು. ಇದಾದ ಬಳಿಕ ಅವರು ಏಳು ಗಂಟೆ ವಿಪಶ್ಯನ ಧ್ಯಾನ ಮಾಡಿದ್ದಾರೆ. “ಕೇಜ್ರಿವಾಲ್ ಅವರು ದೇಶಕ್ಕಾಗಿ ಪ್ರಾರ್ಥಿಸಿ ಧ್ಯಾನ ಆರಂಭಿಸಿದ್ದಾರೆ” ಎಂದು ಆಪ್ ಟ್ವೀಟ್ ಮಾಡಿದೆ. ಧ್ಯಾನದ ಮೂಲಕವೇ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಆಪ್ ನಾಯಕರ ಬಂಧನವನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: Delhi Liquor Policy: ಆಪ್ ವಿರುದ್ಧ ಬಿಜೆಪಿ ತೀವ್ರ ಪ್ರತಿಭಟನೆ; ಅರವಿಂದ್ ಕೇಜ್ರಿವಾಲ್ ಕಳ್ಳ ಎಂದು ಘೋಷಣೆ