Site icon Vistara News

Arvind Kejriwal: ಕೇಜ್ರಿವಾಲ್‌ ನ್ಯಾಯಾಂಗ ಬಂಧನ ವಿಸ್ತರಣೆ; ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್‌

Arvind Kejriwal

ನವದೆಹಲಿ: ದಿಲ್ಲಿ ಅಬಕಾರಿ ನೀತಿಯ (Delhi Excise policy) ಹಿನ್ನೆಲೆಯಲ್ಲಿ ಅಕ್ರಮ ಹಣ (Illegal money transaction) ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal), ಅವರ ನ್ಯಾಯಾಂಗ ಬಂಧನವನ್ನು (Judicial custody) ದೆಹಲಿ ನ್ಯಾಯಾಲಯ ಮೇ 20ರವರೆಗೆ ವಿಸ್ತರಿಸಿದ್ದು, ಅವರು ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಆದೇಶವನ್ನೂ ಕಾಯ್ದಿರಿಸಿದೆ.

ಅಬಕಾರಿ ನೀತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಬಂಧಿಸಲಾಗಿತ್ತು. ಮಧ್ಯಂತರ ಜಾಮೀನು ಕೋರಿ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿಗೆ ಇಡಿ ಆಕ್ಷೇಪ ವ್ಯಕ್ತಪಡಿಸಿತ್ತು. ಅರ್ಜಿ ವಿಚಾರಣೆಗೆ ನಡೆಸಿದ ಕೋರ್ಟ್‌ ತೀರ್ಪನ್ನು ಕಾಯ್ದಿರಿದೆ. ಹೀಗಾಗಿ ಅವರಿಗೆ ಇಂದೂ ಜಾಮೀನು ಸಿಗುವುದಿಲ್ಲ.

ಅಬಕಾರಿ ನೀತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಜೊತೆಗೆ ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ. ಕವಿತಾ (K Kavitha) ಮತ್ತು ಆಮ್ ಆದ್ಮಿ ಪಕ್ಷದ (Aam Admi Party) ಗೋವಾ ಚುನಾವಣೆ ನಿಧಿ ವ್ಯವಸ್ಥಾಪಕ ಚನ್‌ಪ್ರೀತ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಅರವಿಂದ ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ತಮ್ಮ ವೈದ್ಯರೊಂದಿಗೆ ಪ್ರತಿದಿನ 15 ನಿಮಿಷಗಳ ವೈದ್ಯಕೀಯ ಸಮಾಲೋಚನೆಗೆ ಅವಕಾಶ ನೀಡುವಂತೆ ಕೋರಿ ಆಮ್ ಆದ್ಮಿ ಪಕ್ಷದ ಸಂಚಾಲಕರ ಮನವಿಯನ್ನೂ ಈ ಹಿಂದೆ ಕೋರ್ಟ್‌ ತಿರಸ್ಕರಿಸಿತ್ತು.

ಅಬಕಾರಿ ನೀತಿ ಪ್ರಕರಣವೇನು?

ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ. ದೆಹಲಿ ಸರ್ಕಾರವು ನಗರದ ಪ್ರಮುಖ ಮದ್ಯದ ವ್ಯಾಪಾರವನ್ನು ಪರಿಷ್ಕರಿಸುವ ನೀತಿಯನ್ನು ರೂಪಿಸಿದ್ದು, ವ್ಯಾಪಾರಿಗಳಿಗೆ ಪರವಾನಗಿ ಶುಲ್ಕದ ಬದಲಾವಣೆ ಸೇರಿದಂತೆ ಹಲವು ಬದಲಾವಣೆ ಮಾಡಿತ್ತು. ಆದರೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಇದರಲ್ಲಿ ಅಕ್ರಮಗಳನ್ನು ಆರೋಪಿಸಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ಕೋರಿದ್ದರು. ನಂತರ ನೀತಿಯನ್ನು ರದ್ದುಗೊಳಿಸಲಾಯಿತು.

ಸಿಬಿಐ ಮತ್ತು ಇಡಿ ಪ್ರಕಾರ, ಎಎಪಿ ನಾಯಕರು ಅಬಕಾರಿ ನೀತಿಯ ಅಡಿಯಲ್ಲಿ ಪರವಾನಗಿ ನೀಡಲು ರಾಜಕಾರಣಿಗಳು ಮತ್ತು ಮದ್ಯದ ಉದ್ಯಮಿಗಳ ಗುಂಪಿನಿಂದ ₹ 100 ಕೋಟಿ ಕಿಕ್‌ಬ್ಯಾಕ್‌ಗಳನ್ನು ಸ್ವೀಕರಿಸಿದ್ದಾರೆ. ಆರೋಪಪಟ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದ್ದು, ಅಬಕಾರಿ ನೀತಿ ಪ್ರಕರಣದ ಎಲ್ಲಾ ಆರೋಪಿಗಳು ಅಬಕಾರಿ ನೀತಿಯನ್ನು ರೂಪಿಸಲು ದೆಹಲಿ ಸಿಎಂ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ:Lok Sabha Election 2024: ಮತ ಹಾಕಲು ವಿದೇಶದಿಂದ ಬಂದರು! ಒಂದೇ ಕುಟುಂಬದ 69 ಮಂದಿಯ ವೋಟ್‌ ಸೆಲ್ಫಿ!

ದೆಹಲಿ ನ್ಯಾಯಾಲಯವು ಕೇಜ್ರಿವಾಲ್‌ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವಂತೆ ನಿರ್ದೇಶಿಸಿದೆ ಮತ್ತು ಯಾವುದೇ ವಿಶೇಷ ಸಮಾಲೋಚನೆಯ ಅಗತ್ಯವಿದ್ದಲ್ಲಿ, ತಿಹಾರ್ ಜೈಲು ಅಧಿಕಾರಿಗಳು ಅಂತಃಸ್ರಾವಶಾಸ್ತ್ರಜ್ಞರು ಮತ್ತು ಮಧುಮೇಹಶಾಸ್ತ್ರಜ್ಞರನ್ನು ಒಳಗೊಂಡ AIIMS ನಿರ್ದೇಶಕರು ರಚಿಸಿರುವ ವೈದ್ಯಕೀಯ ಮಂಡಳಿಗೆ ತಿಳಿಸಬೇಕಿದೆ.

Exit mobile version