ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣ(Delhi Excise Policy Case)ದ ಆರೋಪದಲ್ಲಿ ಸದ್ಯ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ಪತ್ನಿಯ ಸಮ್ಮುಖದಲ್ಲಿ ವೈದ್ಯರೊಂದಿಗೆ ಪ್ರತಿದಿನ ತಿಹಾರ್ ಜೈಲಿನಲ್ಲಿ 15 ನಿಮಿಷಗಳ ವೈದ್ಯಕೀಯ ಸಮಾಲೋಚನೆಗೆ ಅವಕಾಶ ನೀಡುವಂತೆ ಕೋರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ (Delhi Rouse Avenue Court) ಸೋಮವಾರ ತಿರಸ್ಕರಿಸಿದೆ.
ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಬೇಕು ಮತ್ತು ಯಾವುದೇ ವಿಶೇಷ ಸಮಾಲೋಚನೆಯ ಅಗತ್ಯವಿದ್ದರೆ ಏಮ್ಸ್ ನಿರ್ದೇಶಕರು ರಚಿಸಿದ ಎಂಡೋಕ್ರೈನಾಲಜಿಸ್ಟ್ ಮತ್ತು ಡಯಾಬಿಟಾಲಜಿಸ್ಟ್ ಒಳಗೊಂಡ ವೈದ್ಯಕೀಯ ಮಂಡಳಿಯನ್ನು ತಿಹಾರ್ ಜೈಲು ಅಧಿಕಾರಿಗಳು ಸಂಪರ್ಕಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಕೇಜ್ರಿವಾಲ್ ಅವರು ತಮ್ಮ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಉದ್ದೇಶಪೂರ್ವಕವಾಗಿ ಮಾವಿನಹಣ್ಣು, ಸಿಹಿತಿಂಡಿಗಳು ಮತ್ತು ಇತರ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ ಮತ್ತು ಈ ಮೂಲಕ ಜಾಮೀನು ಪಡೆಯಲು ಸಂಚು ರೂಪಿಸಿದ್ದಾರೆ ಎಂದು ಈ ಹಿಂದೆ ಜಾರಿ ನಿರ್ದೇಶನಾಲಯ (ಇಡಿ) ವಾದಿಸಿತ್ತು.
ಇದಕ್ಕೂ ಮುನ್ನ ಕೇಜ್ರಿವಾಲ್ ಅವರು ತಿಹಾರ್ ಜೈಲು ಅಧಿಕಾರಿಗಳಿಗೆ ಪತ್ರ ಬರೆದು, ತಮ್ಮ ಸಕ್ಕರೆ ಮಟ್ಟ ಹೆಚ್ಚುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರೂ, ಅಗತ್ಯಕ್ಕೆ ತಕ್ಕಂತೆ ಇನ್ಸುಲಿನ್ ನೀಡುತ್ತಿಲ್ಲ ಎಂದು ಆರೋಪಿಸಿದ್ದರು. ರಾಜಕೀಯ ಒತ್ತಡದಿಂದ ಜೈಲು ಅಧಿಕಾರಿಗಳು ಈ ರೀತಿ ಮಾಡುತ್ತಿದ್ದಾರೆ ಎಂದು ಎಪಿಪಿ ಕೂಡ ಹೇಳಿತ್ತು.
ಏಪ್ರಿಲ್ 19ರಂದು ಜೈಲು ಅಧಿಕಾರಿಗಳು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರಿಗೆ ವರದಿಯನ್ನು ಸಲ್ಲಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯವನ್ನು ಏಪ್ರಿಲ್ 10 ಮತ್ತು ಏಪ್ರಿಲ್ 15ರಂದು ತಜ್ಞರು ಪರಿಶೀಲನೆ ನಡೆಸಿದ್ದಾರೆ. ತಜ್ಞರು ಮಧುಮೇಹ ವಿರೋಧಿ ಔಷಧಗಳನ್ನು ಶಿಫಾರಸು ಮಾಡಿದ್ದರು. ಅಲ್ಲದೆ ಕೇಜ್ರಿವಾಲ್ ಅವರ ಚಿಕಿತ್ಸೆಯ ಸಮಯದಲ್ಲಿ ಇನ್ಸುಲಿನ್ ಅನ್ನು ಎಂದಿಗೂ ನಿರಾಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ʼಅಸಾಮಾನ್ಯ ಮಧ್ಯಂತರ ಜಾಮೀನುʼ ಕೋರಿದ ಅರ್ಜಿ ವಜಾ
ಕೆಲ ತಾಸುಗಳ ಮುನ್ನ ಅರವಿಂದ್ ಕೇಜ್ರಿವಾಲ್ ಅವರನ್ನು ‘ಅಸಾಮಾನ್ಯ ಮಧ್ಯಂತರ ಜಾಮೀನು’ ಮೇಲೆ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಜತೆಗೆ ಅರ್ಜಿದಾರರಿಗೆ ₹ 75,000 ಕೋರ್ಟ್ ಖರ್ಚು ವೆಚ್ಚವನ್ನು ವಿಧಿಸಿತ್ತು.
ಇದನ್ನೂ ಓದಿ: Arvind Kejriwal: ಜೈಲಿನಲ್ಲಿ ಕೇಜ್ರಿವಾಲ್, ದಿಲ್ಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ?
ನ್ಯಾಯಾಲಯದ ಆದೇಶದ ಮೇರೆಗೆ ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ʼವೀ ದಿ ಪೀಪಲ್ ಆಫ್ ಇಂಡಿಯಾ’ ಎಂಬ ಹೆಸರಿನಲ್ಲಿ ನಾಲ್ಕನೇ ವರ್ಷದ ಕಾನೂನು ವಿದ್ಯಾರ್ಥಿಯೊಬ್ಬರು ಅವರ ಜಾಮೀನಿಗೆ ಮನವಿಯನ್ನು ಸಲ್ಲಿಸಿದ್ದರು. ಇದನ್ನು ನಿರ್ವಹಿಸಲಾಗುವುದಿಲ್ಲ. ಏಕೆಂದರೆ ನ್ಯಾಯಾಲಯವು ತನ್ನ ರಿಟ್ ಅಧಿಕಾರ ವ್ಯಾಪ್ತಿಯಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಅಸಾಮಾನ್ಯ ಮಧ್ಯಂತರ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.