ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ಪ್ರಕರಣದಲ್ಲಿ ಜಾಮೀನು ಸಿಕ್ಕರೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್(Arvind Kejriwal)ಗೆ ಬಿಡುಗಡೆ ಭಾಗ್ಯ ಇನ್ನೂ ಸಿಕ್ಕಿಲ್ಲ. ಕೇಜ್ರಿವಾಲ್ ಅವರಿಗೆ ನೀಡಿರುವ ಜಾಮೀನು ಅರ್ಜಿ ಪ್ರಶ್ನಿಸಿ ಇಡಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಜೈಲಿನಿಂದ ಬಿಡುಗಡೆಗೊಳಿಸುವಂತಿಲ್ಲ ಎಂದು ದಿಲ್ಲಿ ಹೈಕೋರ್ಟ್ ತಡೆಯಾಜ್ಞೆ ಹೊರಡಿಸಿದೆ.
ನಿನ್ನೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು, ಒಂದು ಲಕ್ಷ ರೂ. ಬಾಂಡ್ ಪಡೆದು, ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಇದೀಗ ಇದನ್ನು ಪ್ರಶ್ನಿಸಿ ಇಡಿ ದೆಹಲಿ ಹೈಕೋರ್ಟ್(Delhi High court)ಗೆ ಕದ ತಟ್ಟಿದೆ. ಇಂದು ಬೆಳಗ್ಗೆ ಇಡಿ ಕೇಜ್ರಿವಾಲ್ ಜಾಮೀನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿಯ ತುರ್ತು ವಿಚಾರಣೆಗೆ ಒಪ್ಪಿರುವ ಹೈಕೋರ್ಟ್ ವಿಚಾರಣೆ ಪೂರ್ಣಗೊಳ್ಳುವವರೆಗೆ ವಿಚಾರಣಾ ಕೋರ್ಟ್ ನೀಡಿರುವ ಜಾಮೀನು ಆದೇಶಕ್ಕೆ ತಡೆಯಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದೆ.
ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಅವೆನ್ಯೂ ಕೋರ್ಟ್ ನಿನ್ನೆ ಅವರಿಗೆ ಜಾಮೀನು ನೀಡಿತ್ತು. ಇದರೊಂದಿಗೆ ಅರವಿಂದ್ ಕೇಜ್ರಿವಾಲ್ ಅವರ ಮೂರು ತಿಂಗಳ ಜೈಲುವಾಸವೂ ತಾತ್ಕಾಲಿಕವಾಗಿ ಅಂತ್ಯವಾದಂತಾಗಿದೆ. ಶುಕ್ರವಾರ ಬಾಂಡ್ ಬೇಲ್‌ಗೆ ಅರವಿಂದ್ ಕೇಜ್ರಿವಾಲ್ ಅರ್ಜಿ ಹಾಕಬಹುದಾಗಿದ್ದು, ಶುಕ್ರವಾರವೇ (ಜೂನ್ 21) ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಬೇಲ್ ಬಾಂಡ್‌ಗಳನ್ನು ಸ್ವೀಕರಿಸಲು ಎರಡು ದಿನ ಟೈಮ್ ಬೇಕು ಎಂಬುದಾಗಿ ಇ.ಡಿ ಮನವಿ ಮಾಡಿತ್ತು. ಆದರೆ, ಇದಕ್ಕೆ ನ್ಯಾ. ನಿಯಾಯ್ ಬಿಂದು ಅವರು ನಕಾರ ವ್ಯಕ್ತಪಡಿಸಿದರು.
ಏನಿದು ಪ್ರಕರಣ?
ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ಮಾತ್ರವಲ್ಲ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಇ.ಡಿ. 9 ಬಾರಿ ನೋಟಿಸ್ ಜಾರಿ ಮಾಡಿತ್ತು. ಬಳಿಕ ಮಾರ್ಚ್ 21ರಂದು ಅವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಅವರು ಮಧ್ಯಂತರ ಜಾಮೀನು ಪಡೆದು ಒಂದು ತಿಂಗಳು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಜೈಲಿಗೆ ಮರಳುವಂತೆ ಕೋರ್ಟ್ ಈ ಹಿಂದೆಯೇ ಆದೇಶಿಸಿತ್ತು. ಅದರಂತೆ, ಕೇಜ್ರಿವಾಲ್ ಅವರು ಜೈಲಿಗೆ ಮರಳಿದ್ದರು. ಈಗ ಕೊನೆಗೂ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.
ಇದನ್ನೂ ಓದಿ: Nitish Kumar: ನಿತೀಶ್ ಕುಮಾರ್ ಸರ್ಕಾರಕ್ಕೆ ಹಿನ್ನಡೆ; ಮೀಸಲಾತಿ ಪ್ರಮಾಣ ಶೇ. 65ಕ್ಕೆ ಏರಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ