Site icon Vistara News

Arvind Kejriwal: ಕೇಜ್ರಿವಾಲ್‌ಗೆ ಜೈಲೂಟವೇ ಗತಿ! ಜಾಮೀನಿಗೆ ಹೈಕೋರ್ಟ್‌ ತಡೆಯಾಜ್ಞೆ

Arvind Kejriwal

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ (Delhi Excise Policy Case) ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಜಾಮೀನು ಮಂಜೂರು ಮಾಡಿದ್ದ ರೋಸ್‌ ಅವೆನ್ಯೂ ಕೋರ್ಟ್‌ ಆದೇಶಕ್ಕೆ ದೆಹಲಿ ಹೈಕೋರ್ಟ್‌ (Delhi High Court) ತಡೆಯಾಜ್ಞೆ ನೀಡಿದೆ. ಜೂ.20ರಂದು ರೋಸ್‌ ಅವೆನ್ಯೂ ಕೋರ್ಟ್‌ ಕೇಜ್ರಿವಾಲ್‌ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ರೋಸ್‌ ಅವೆನ್ಯೂ ಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಇ.ಡಿ ಅಧಿಕಾರಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ನಡೆಸುವವರೆಗೂ ಬಿಡುಗಡೆ ಮಾಡಬಾರದು ಎಂಬುದಾಗಿ ದೆಹಲಿ ಕೋರ್ಟ್‌ ಶುಕ್ರವಾರ (ಜೂನ್‌ 21) ಬೆಳಗ್ಗೆ ಆದೇಶ ಹೊರಡಿಸಿತು. ಜಾಮೀನಿಗೆ ಸಂಬಂಧಿಸಿದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ. ಇನ್ನೂ 2-3 ದಿನಗಳ ಬಳಿಕ ಆದೇಶ ಹೊರಡಿಸಲಾಗುವುದು ಎಂಬುದಾಗಿ ಕೋರ್ಟ್‌ ಹೇಳಿತ್ತು. ರೋಸ್‌ ಅವೆನ್ಯೂ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದ ನ್ಯಾಯಾಲಯವು, ಆದೇಶವನ್ನು ಮೀಸಲಿರಿಸಿತು. ಆದರೆ ಇಂದು ಹೈಕೋರ್ಟ್‌ ಮತ್ತೆ ತಡೆಯಾಜ್ಞೆಯನ್ನು ಎತ್ತಿ ಹಿಡಿದಿದ್ದು, ಕೇಜ್ರಿವಾಲ್‌ ಜೈಲುವಾಸ ಮತ್ತೆ ಮುಂದುವರೆಯುವಂತಾಗಿದೆ.

ಅದೂ ಅಲ್ಲದೇ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾಮೀನು ಮಂಜೂರು ಮಾಡಿದ್ದ ರೋಸ್‌ ಅವೆನ್ಯೂ ಕೋರ್ಟ್‌ ಆದೇಶಕ್ಕೆ ದೆಹಲಿ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದ ಕೇಜ್ರಿವಾಲ್‌ಗೆ ಅಲ್ಲೂ ರಿಲೀಫ್‌ ಸಿಕ್ಕಿರಲಿಲ್ಲ.

ಏನಿದು ಪ್ರಕರಣ?

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಅರವಿಂದ್‌ ಕೇಜ್ರಿವಾಲ್‌ ಮಾತ್ರವಲ್ಲ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್​ ಅವರಿಗೆ ಇ.ಡಿ. 9 ಬಾರಿ ನೋಟಿಸ್ ಜಾರಿ ಮಾಡಿತ್ತು. ಬಳಿಕ ಮಾರ್ಚ್​ 21ರಂದು ಅವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಅವರು ಮಧ್ಯಂತರ ಜಾಮೀನು ಪಡೆದು ಒಂದು ತಿಂಗಳು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಜೈಲಿಗೆ ಮರಳುವಂತೆ ಕೋರ್ಟ್‌ ಈ ಹಿಂದೆಯೇ ಆದೇಶಿಸಿತ್ತು.

ಇದನ್ನೂ ಓದಿ: Shashi Tharoor Controversy: ಉತ್ತರಪ್ರದೇಶದ ಬಗ್ಗೆ ಶಶಿ ತರೂರ್‌ ಹೇಳಿದ್ದೇನು ಗೊತ್ತಾ?; ಭಾರೀ ವಿವಾದಕ್ಕೀಡಾಗ್ತಿದೆ ಈ ಪೋಸ್ಟ್‌

Exit mobile version