Site icon Vistara News

Arvind Kejriwal: ದೆಹಲಿ ಸಿಎಂ ಆಪ್ತ ಕಾರ್ಯದರ್ಶಿ ಸೇರಿ ಆಪ್‌ ನಾಯಕರ ನಿವಾಸಗಳ ಮೇಲೆ ಇಡಿ ದಾಳಿ

Delhi CM moves motion of confidence in assembly and ED Summons to Kejriwal

Arvind Kejriwal

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ (Bibhav Kumar) ಮತ್ತು ಆಮ್ ಆದ್ಮಿ ಪಕ್ಷ(Aam Aadmi Party)ದ ಇತರ ಪ್ರಮುಖ ನಾಯಕರಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ(Enforcement Directorate) ಮಂಗಳವಾರ ದಾಳಿ ನಡೆಸಿದೆ. ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ 10 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಜಲ ಮಂಡಳಿಗೆ ಸಂಬಂಧಿಸಿದ ಹಗರಣದ ತನಿಖೆಯ ಭಾಗವಾಗಿ ಈ ಶೋಧ ನಡೆಸಲಾಗಿದೆ.

ತನಿಖೆಯ ಭಾಗವಾಗಿ ಕೇಂದ್ರ ತನಿಖಾ ಸಂಸ್ಥೆ ದೆಹಲಿ ಜಲ ಮಂಡಳಿ (DJB) ಮಾಜಿ ಸದಸ್ಯ ಶಲಭ್ ಕುಮಾರ್ ಮತ್ತು ಪಕ್ಷದ ರಾಜ್ಯಸಭಾ ಸದಸ್ಯರೂ ಆಗಿರುವ ಎಎಪಿ ಖಜಾಂಚಿ ಎನ್‌.ಡಿ.ಗುಪ್ತಾ ಅವರ ನಿವಾಸದಲ್ಲಿಯೂ ಶೋಧ ನಡೆಸಿದೆ.

ಏನಿದು ಅಕ್ರಮ?

ದೆಹಲಿ ಜಲ ಮಂಡಳಿಯ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಕೇಂದ್ರ ತನಿಖಾ ದಳ (CBI) ಮತ್ತು ದೆಹಲಿ ಸರ್ಕಾರದ ಭ್ರಷ್ಟಾಚಾರ ನಿಗ್ರಹ ದಳ (ACB) ಎಫ್ಐಆರ್ ದಾಖಲಿಸಿದ ಆಧಾರದ ಮೇಲೆ ಡಿಜೆಬಿಯ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಪಿಎಂಎಲ್ಎ ಕಾನೂನಿನ ಅಡಿಯಲ್ಲಿ ಜಲ ಮಂಡಳಿಯ ಮಾಜಿ ಮುಖ್ಯ ಎಂಜಿನಿಯರ್ ಅವರನ್ನು ಬಂಧಿಸಲಾಗಿತ್ತು. ಅಲ್ಲದೆ ಉದ್ಯಮಿಯನ್ನೂ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಜಲ ಮಂಡಳಿಯ ಮುಖ್ಯ ಎಂಜಿನಿಯರ್ ಆಗಿದ್ದ ಜಗದೀಶ್ ಕುಮಾರ್ ಅರೋರಾ ಅವರು ವಿವಿಧ ಕಾಮಗಾರಿಗಳಿಗಾಗಿ ಎನ್‌ಕೆಜಿ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (NKG Infrastructure Ltd.)ಗೆ ಒಟ್ಟು 38 ಕೋಟಿ ರೂ.ಗಳ ಗುತ್ತಿಗೆಯನ್ನು ನೀಡಿದ್ದರು. ಎನ್‌ಕೆಜಿ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ನಕಲಿ, ಸುಳ್ಳು ದಾಖಲೆಗಳನ್ನು ಸಲ್ಲಿಸುವ ಮೂಲಕ ಬಿಡ್ ಪಡೆದುಕೊಂಡಿದೆ ಎನ್ನುವುದು ಇಡಿ ತನಿಖೆಯ ವೇಳೆ ಕಂಡು ಬಂದಿತ್ತು.

ಎನ್‌ಕೆಜಿ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಬಳಿಕ ಅನಿಲ್ ಕುಮಾರ್ ಅಗರ್ವಾಲ್ ಒಡೆತನದ ಇಂಟೆಗ್ರಲ್ ಸ್ಕ್ರೂಸ್ ಲಿಮಿಟೆಡ್ (Integral Screws Ltd.)ಗೆ ಕಾಮಗಾರಿಯನ್ನ ಉಪಗುತ್ತಿಗೆ ನೀಡಿದೆ ಎಂದು ಹೆಚ್ಚಿನ ತನಿಖೆಯಿಂದ ತಿಳಿದು ಬಂದಿದೆ. ಹಣವನ್ನು ಸ್ವೀಕರಿಸಿದ ನಂತರ, ಅಗರ್ವಾಲ್ ನಗದು ಮತ್ತು ಬ್ಯಾಂಕ್ ವಹಿವಾಟು ಸೇರಿದಂತೆ ವಿವಿಧ ವಿಧಾನಗಳ ಮೂಲಕ ಜಗದೀಶ್ ಕುಮಾರ್ ಅರೋರಾ ಅವರಿಗೆ ಸುಮಾರು 3 ಕೋಟಿ ರೂ.ಗಳನ್ನು ಲಂಚವಾಗಿ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಲಂಚದ ಮೊತ್ತವನ್ನು ವರ್ಗಾಯಿಸಲು ಅರೋರಾ ಅವರ ಸಹವರ್ತಿಗಳು ಮತ್ತು ಸಂಬಂಧಿಕರಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಬಳಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Arvind Kejriwal: ಅರವಿಂದ್ ಕೇಜ್ರಿವಾಲ್‌ಗೆ 5ನೇ ಬಾರಿ ಇ.ಡಿ. ಸಮನ್ಸ್!

ಇತ್ತ ಆರೋಪಗಳನ್ನು ನಿರಾಕರಿಸಿದ ಆಪ್‌ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʼʼಬಿಜೆಪಿಯ ಒತ್ತಾಯದ ಮೇರೆಗೆ ಇಡಿ ದಾಳಿ ನಡೆಸುತ್ತಿದೆ. ಈ ಮೂಲಕ ಬಿಜೆಪಿ ದ್ವೇಷದ ರಾಜಕರಣ ನಡೆಸುತ್ತಿದೆʼʼ ಎಂದು ಹೇಳಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version