ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ (Excise Policy Case) ನಡೆದಿದೆ ಎನ್ನಲಾದ ಭಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ನಡುವಿನ ಜಟಾಪಟಿ ಮುಂದುವರಿದಿದೆ. ವಿಚಾರಣೆಗೆ ಹಾಜರಾಗುವಂತೆ ಆರು ಬಾರಿ ಸಮನ್ಸ್ (ED Summons) ನೀಡಿದರೂ ಅರವಿಂದ್ ಕೇಜ್ರಿವಾಲ್ ಅವರು ವಿಚಾರಣೆಗೆ ಹಾಜರಾಗದ ಕಾರಣ ಇ.ಡಿ ಅಧಿಕಾರಿಗಳು ಏಳನೇ ಬಾರಿ ಸಮನ್ಸ್ ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಫೆಬ್ರವರಿ 26ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಇ.ಡಿ ಸಮನ್ಸ್‌ನಲ್ಲಿ ಉಲ್ಲೇಖಿಸಲಾಗಿದೆ. ಅರವಿಂದ್ ಕೇಜ್ರಿವಾಲ್ ಅವರು ವಿಚಾರಣೆಗೆ ಹಾಜರಾಗದಿರುವ ಕುರಿತು ಇ.ಡಿ ಕೋರ್ಟ್ ಮೊರೆ ಹೋಗಿದ್ದು, ಉದ್ದೇಶಪೂರ್ವಕವಾಗಿಯೇ ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದೆ. ಅತ್ತ, ಪ್ರಕರಣ ಕೋರ್ಟ್‌ನಲ್ಲಿದೆ. ಕೋರ್ಟ್ ತೀರ್ಪು ಬರುವವರೆಗೆ ಇ.ಡಿ ಕಾಯಬೇಕು ಎಂಬುದು ಆಮ್ ಆದ್ಮಿ ಪಕ್ಷದ ನಿಲುವಾಗಿದೆ. ಅಲ್ಲದೆ, ಇ.ಡಿ ಕಾನೂನುಬಾಹಿರವಾಗಿ ಸಮನ್ಸ್ ನೀಡುತ್ತಿದೆ ಎಂದು ಕೂಡ ಆಪ್ ಆರೋಪಿಸಿದೆ.
Delhi Excise policy case | ED summons Delhi CM Arvind Kejriwal to appear before it on Monday, 26th February: Sources
— ANI (@ANI) February 22, 2024
This is the 7th ED summon to him.
(File photo) pic.twitter.com/X7n0TaJieK
ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎಂಬ ಆರೋಪದಲ್ಲಿ ಈಗಾಗಲೇ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿ ಹಲವರನ್ನು ಬಂಧಿಸಲಾಗಿದೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗುತ್ತಿದೆ ನವೆಂಬರ್ 2 ಹಾಗೂ ನವೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ ನೋಟಿಸ್ ಜಾರಿಗೊಳಿಸಿತ್ತು. ಎರಡು ಬಾರಿಯೂ ಕೇಜ್ರಿವಾಲ್ ಅವರು ವಿಚಾರಣೆಗೆ ಗೈರಾದ ಕಾರಣ ಜನವರಿ 3ರಂದು ಹಾಜರಾಗುವಂತೆ ಮೂರನೇ ಸಮನ್ಸ್ ಜಾರಿಗೊಳಿಸಲಾಗಿತ್ತು. ಮೂರನೇ ಬಾರಿಯೂ ಅವರ ವಿಚಾರಣೆಗೆ ಗೈರಾಗಿದ್ದರು. ಜನವರಿ 19 ಹಾಗೂ ಫೆಬ್ರವರಿ 2ರಂದು ನೀಡಿದ ಸಮನ್ಸ್‌ಗಳಿಗೂ ಅರವಿಂದ್ ಕೇಜ್ರಿವಾಲ್ ಕ್ಯಾರೇ ಎಂದಿರಲಿಲ್ಲ. ಫೆಬ್ರವರಿ 19ರ ವಿಚಾರಣೆಗೂ ಕೇಜ್ರಿವಾಲ್ ಹಾಜರಾಗಿಲ್ಲ. ಹಾಗಾಗಿ, ಮತ್ತೆ ಸಮನ್ಸ್ ನೀಡಿದೆ.
ಏನಿದು ಪ್ರಕರಣ?
ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಅದಕ್ಕಾಗಿ ಲಂಚ ನೀಡಲಾಗಿದೆ ಎನ್ನುವ ಆರೋಪವಿದೆ. ಇದನ್ನು ಎಎಪಿ ಪದೇಪದೆ ನಿರಾಕರಿಸುತ್ತಲೇ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ