Site icon Vistara News

ಕೇಂದ್ರದ ಸುಗ್ರೀವಾಜ್ಞೆ ವಿಚಾರದಲ್ಲಿ ಕೇಜ್ರಿವಾಲ್‌ ಪರ ನಿಂತ ಸ್ಟಾಲಿನ್‌; ಕಾಂಗ್ರೆಸ್‌ ಬೆಂಬಲಕ್ಕೆ ಒತ್ತಾಯ

Arvind Kejriwal Meets MK Stalin In Tamilnadu

Arvind Kejriwal gets MK Stalin's support in Centre ordinance row

ಚೆನ್ನೈ: ದೆಹಲಿಯಲ್ಲಿ ಆಡಳಿತ ಸೇವೆಗಳ ಮೇಲೆ ನಿಯಂತ್ರಣ ಸಾಧಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯ ವಿರುದ್ಧ ಪ್ರತಿಪಕ್ಷಗಳ ಬೆಂಬಲ ಪಡೆಯುವಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಯಶಸ್ವಿಯಾಗುತ್ತಿದ್ದಾರೆ. ಸುಗ್ರೀವಾಜ್ಞೆ ವಿರುದ್ಧ ಪ್ರತಿಪಕ್ಷಗಳ ಬೆಂಬಲ ಪಡೆಯುವ ದಿಸೆಯಲ್ಲಿ ಕೇಜ್ರಿವಾಲ್‌ ಅವರು ಚೆನ್ನೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರನ್ನು ಭೇಟಿಯಾಗಿದ್ದು, ಕೇಜ್ರಿವಾಲ್‌ ಅವರಿಗೆ ಸ್ಟಾಲಿನ್‌ ಬೆಂಬಲ ಸೂಚಿಸಿದ್ದಾರೆ.

“ಕೇಂದ್ರ ಸರ್ಕಾರವು ಆಮ್‌ ಆದ್ಮಿ ಪಕ್ಷಕ್ಕೆ ಸಂಕಷ್ಟ ತರಲು ಪ್ರಯತ್ನಿಸುತ್ತಿದೆ. ಚುನಾಯಿತ ಸರ್ಕಾರದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತಿದೆ. ದೆಹಲಿ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದರೂ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದನ್ನು ನಾವು ವಿರೋಧಿಸುತ್ತೇವೆ. ಅರವಿಂದ್‌ ಕೇಜ್ರಿವಾಲ್‌ ಅವರು ನಮ್ಮ ಸ್ನೇಹಿತರು. ಅವರಿಗೆ ನಾವು ಬೆಂಬಲ ಸೂಚಿಸಿದ್ದೇವೆ. ಬಿಜೆಪಿಯೇತರ ಪಕ್ಷಗಳು ಕೂಡ ಕೇಜ್ರಿವಾಲ್‌ ಅವರಿಗೆ ಬೆಂಬಲ ನೀಡಬೇಕು” ಎಂದು ಸ್ಟಾಲಿನ್‌ ಹೇಳಿದರು.

ಸ್ಟಾಲಿನ್‌ ಜತೆ ಕೇಜ್ರಿವಾಲ್‌ ಸಭೆ

ದೆಹಲಿಯಲ್ಲಿ ಎ ಗ್ರೂಪ್‌ ಅಧಿಕಾರಿಗಳ ವರ್ಗಾವಣೆ ಹಾಗೂ ಶಿಸ್ತು ಪ್ರಕ್ರಿಯೆಗಳ ಉಸ್ತುವಾರಿಗಾಗಿ ಕೇಂದ್ರ ಸರ್ಕಾರವು “ರಾಷ್ಟ್ರ ರಾಜಧಾನಿ ಸೇವಾ ಪ್ರಾಧಿಕಾರವನ್ನು (NCCSA) ರಚಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಇದರ ವಿರುದ್ಧ ಆಪ್‌ ಸಮರ ಸಾರಿದೆ. ದೆಹಲಿಯ ಕಾನೂನು ಸುವ್ಯವಸ್ಥೆ ಮತ್ತು ಭೂಮಿ ವಿಷಯವನ್ನು ಬಿಟ್ಟು, ಉಳಿದೆಲ್ಲ ಸೇವೆಗಳಿಗೆ ಸಂಬಂಧಪಟ್ಟ ಆಡಳಿತಾತ್ಮಕ ಅಧಿಕಾರ ಸ್ಥಳೀಯ ಪ್ರಜಾಪ್ರಭುತ್ವ ಸರ್ಕಾರದ್ದು ಎಂದು ಕಳೆದ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ನೀಡಿದೆ. ಇದಾದ ಬಳಿಕ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.

ಇದನ್ನೂ ಓದಿ: NCERT Textbooks: ಆಪರೇಷನ್‌ ಪಠ್ಯಪುಸ್ತಕ; ಖಲಿಸ್ತಾನ, ಅಸಮಾನತೆ, ಪ್ರಜಾಪ್ರಭುತ್ವ ಚಾಪ್ಟರ್‌ ಕೈಬಿಟ್ಟ ಎನ್‌ಸಿಇಆರ್‌ಟಿ

ಕೇಂದ್ರದ ಸುಗ್ರೀವಾಜ್ಞೆ ವಿರುದ್ಧದ ಹೋರಾಟದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಈಗಾಗಲೇ ಹಲವು ಪಕ್ಷಗಳು ಬೆಂಬಲ ಸೂಚಿಸಿವೆ. ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‌ ಠಾಕ್ರೆ, ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಸೇರಿ ಪ್ರತಿಪಕ್ಷಗಳ ಹಲವು ನಾಯಕರು ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನು, ಕಾಂಗ್ರೆಸ್‌ ಕೂಡ ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಚೆನ್ನೈನಲ್ಲಿ ಅರವಿಂದ್‌ ಕೇಜ್ರಿವಾಲ್‌ ಆಗ್ರಹಿಸಿದರು.

Exit mobile version