Site icon Vistara News

Arvind Kejriwal: ಜೈಲಿನಿಂದ ಬಂದ ಕೇಜ್ರಿವಾಲ್‌ಗೆ ಆರತಿ ಬೆಳಗಿ, ಹೂ ಹಾರ ಹಾಕಿ ಸ್ವಾಗತಿಸಿದ ತಾಯಿ! ವಿಡಿಯೊ ನೋಡಿ

Arvind Kejriwal

Arvind Kejriwal

ನವದೆಹಲಿ: ದೆಹಲಿ ಅಬಕಾರಿ ನೀತಿ (Delhi Excise policy) ಹಗರಣದಲ್ಲಿ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ (ED) ಬಂಧಿಸಲ್ಪಟ್ಟ ಆಮ್ ಆದ್ಮಿ ಪಕ್ಷದ (Aam Admi Party) ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಸುಪ್ರೀಂ ಕೋರ್ಟ್ (Supreme court) ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ. ಏಳು ಹಂತದ ಲೋಕಸಭೆ ಚುನಾವಣೆಯ (Lok Sabha Election 2024) ಅಂತಿಮ ಹಂತದ ಮತದಾನವಾದ ಜೂನ್ 1ರವರೆಗೆ ರಿಲೀಫ್‌ ಸಿಕ್ಕಿದೆ. ಹೀಗಾಗಿ ಕೇಜ್ರಿವಾಲ್‌ ಅವರು ಜೈಲಿನಿಂದ ಹೊರಬರುತ್ತಲೇ ಆಪ್‌ ಕಾರ್ಯಕರ್ತರು ಜೈಕಾರ ಕೂಗಿ ಅವರನ್ನು ಸ್ವಾಗತಿಸಿದರು. ಜತೆಗೆ ತಾಯಿ ಅವರನ್ನು ಹೂ ಮಾಲೆ ಹಾಕಿ ಮನೆಯೊಳಗೆ ಬರಮಾಡಿಕೊಂಡರು. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral Video).

ತಿಹಾರ್‌ ಜೈಲಿನಿಂದ ಕೇಜ್ರಿವಾಲ್‌ ಶುಕ್ರವಾರ ಸಂಜೆ ಸುಮಾರು 7 ಗಂಟೆಗೆ ಹೊರ ಬಂದರು. ನೆರೆದಿದ್ದ ಸಾವಿರಾರು ಕಾರ್ಯಕರ್ತರು ಜಯಘೋಷದೊಂದಿಗೆ ಅವರನ್ನು ಸ್ವಾಗತಿಸಿದರು. ಕೇಜ್ರಿವಾಲ್‌ ಮನೆಗೆ ಆಗಮಿಸುತ್ತಿದ್ದಂತೆ ಆಪ್‌ ಸಂಸದ ಸಂಜಯ್‌ ಸಿಂಗ್‌ ಎದುರುಗೊಂಡರು. ಜತೆಗೆ ಅರವಿಂದ್ ಕೇಜ್ರಿವಾಲ್ ಅವರ ತಾಯಿ ಮತ್ತು ಪತ್ನಿ ಆರತಿ ಬೆಳಗಿ, ಹಾರ ಹಾಕಿ ಮನೆಗೆ ಸ್ವಾಗತಿಸಿದರು.

ಬಾಗಿಲ್ಲೇ ಕಾದು ನಿಂತಿದ್ದ ತಾಯಿ

ಮಗನ ಬರುವಿಕೆಗಾಗಿ ಕೇಜ್ರಿವಾಲ್‌ ಅವರ ತಾಯಿ ಮನೆ ಬಾಗಿಲ ಬಳಿಯಲ್ಲೇ ಹೂ ಹಾರ ಹಿಡಿದು ಕಾದು ನಿಂತಿದ್ದರು. ಸಂಬಂಧಿಕರು ಆರತಿ ಎತ್ತಿದರು. ಒಳ ಬರುತ್ತಲೇ ಕೇಜ್ರಿವಾಲ್‌ ತಮ್ಮ ತಾಯಿ, ತಂದೆಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಕೇಜ್ರಿವಾಲ್ ಅವರ ತಂದೆ ಮಗನನ್ನು ತಬ್ಬಿಕೊಂಡರು. ಮಗನ ಬೆನ್ನನ್ನು ಆತ್ಮೀಯವಾಗಿ ತಟ್ಟಿದರು.

ದೇವಸ್ಥಾನಕ್ಕೆ ಭೇಟಿ ನೀಡಿದ ಕೇಜ್ರಿವಾಲ್‌

ಅರವಿಂದ್‌ ಕೇಜ್ರಿವಾಲ್‌ ಇಂದು (ಶನಿವಾರ) ದೆಹಲಿಯ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಲೋಕಸಭಾ ಚುನಾವಣೆಯ ಪ್ರಚಾರವನ್ನು ಪ್ರಾರಂಭಿಸಿದರು. ಈ ವೇಳೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಅವರೊಂದಿಗಿದ್ದರು.

ಷರತ್ತು ಅನ್ವಯ

ಜಾಮೀನು ನೀಡುವ ಮೊದಲು ನ್ಯಾಯಾಲಯ ಯಾವುದೇ ಕಡತಗಳಿಗೆ ಸಹಿ ಹಾಕಬಾರದು ಎಂಬುದು ಸೇರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಹಲವು ಷರತ್ತುಗಳನ್ನು ವಿಧಿಸಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಮಾತನಾಡಿದ ಕೇಜ್ರಿವಾಲ್‌, “ನಾನು ನಿಮಗೆಲ್ಲ ಧನ್ಯವಾದ ಹೇಳಲು ಬಯಸುತ್ತೇನೆ. ನೀವೆಲ್ಲರೂ ನನಗೆ ಆಶೀರ್ವಾದ ಮಾಡಿದ್ದೀರಿ. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಅವರಿಂದಾಗಿಯೇ ನಾನು ಈಗ ಜೈಲಿನಿಂದ ಬಿಡುಗಡೆಯಾಗಿದ್ದೇನೆ. ಸರ್ವಾಧಿಕಾರದಿಂದ ಪ್ರಜಾಪ್ರಭುತ್ವವನ್ನು ಉಳಿಸಲು ಎಲ್ಲರೂ ಹೋರಾಡೋಣ” ಎಂದು ಹೇಳಿದರು.

ಅಬಕಾರಿ ನೀತಿ ಪ್ರಕರಣವೇನು?

ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ. ದೆಹಲಿ ಸರ್ಕಾರವು ನಗರದ ಪ್ರಮುಖ ಮದ್ಯದ ವ್ಯಾಪಾರವನ್ನು ಪರಿಷ್ಕರಿಸುವ ನೀತಿಯನ್ನು ರೂಪಿಸಿದ್ದು, ವ್ಯಾಪಾರಿಗಳಿಗೆ ಪರವಾನಗಿ ಶುಲ್ಕದ ಬದಲಾವಣೆ ಸೇರಿದಂತೆ ಹಲವು ಬದಲಾವಣೆ ಮಾಡಿತ್ತು. ಆದರೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಇದರಲ್ಲಿ ಅಕ್ರಮಗಳನ್ನು ಆರೋಪಿಸಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ಕೋರಿದ್ದರು. ನಂತರ ನೀತಿಯನ್ನು ರದ್ದುಗೊಳಿಸಲಾಯಿತು.

ಸಿಬಿಐ ಮತ್ತು ಇಡಿ ಪ್ರಕಾರ, ಎಎಪಿ ನಾಯಕರು ಅಬಕಾರಿ ನೀತಿಯ ಅಡಿಯಲ್ಲಿ ಪರವಾನಗಿ ನೀಡಲು ರಾಜಕಾರಣಿಗಳು ಮತ್ತು ಮದ್ಯದ ಉದ್ಯಮಿಗಳ ಗುಂಪಿನಿಂದ ₹ 100 ಕೋಟಿ ಕಿಕ್‌ಬ್ಯಾಕ್‌ಗಳನ್ನು ಸ್ವೀಕರಿಸಿದ್ದಾರೆ. ಆರೋಪಪಟ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದ್ದು, ಅಬಕಾರಿ ನೀತಿ ಪ್ರಕರಣದ ಎಲ್ಲಾ ಆರೋಪಿಗಳು ಅಬಕಾರಿ ನೀತಿಯನ್ನು ರೂಪಿಸಲು ದೆಹಲಿ ಸಿಎಂ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿತ್ತು. 

ಇದನ್ನೂ ಓದಿ: Arvind Kejriwal: ಜೂನ್‌ 1ರವರೆಗೆ ಕೇಜ್ರಿವಾಲ್‌ಗೆ ಜಾಮೀನು, ಮತದಾನ ಮುಗಿಯುವವರೆಗೆ ರಿಲೀಫ್‌

Exit mobile version