ನವ ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜಕೀಯ ಸಿದ್ಧಾಂತಗಳು ಏನೇ ಇದ್ದರೂ, ಅವರು ಒಂದಿಲ್ಲೊಂದು ವಿನೂತನ, ಜನರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಮಾಡುತ್ತಾರೆ ಮತ್ತು ಇದೇ ಕಾರಣಕ್ಕೆ ದೆಹಲಿ ಜನರಲ್ಲಿ ಭರವಸೆ ಮೂಡಿಸಿದ್ದಾರೆ. ಇದೀಗ ಅರವಿಂದ್ ಕೇಜ್ರಿವಾಲ್ ಮತ್ತೊಂದು ಹೊಸ ಉಪಕ್ರಮವನ್ನು ಇಂದು ಲೋಕಾರ್ಪಣೆ ಗೊಳಿಸಿದ್ದಾರೆ. ‘ಇಡೀ ರಾಷ್ಟ್ರ ಮಟ್ಟದ ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಉದ್ಯೋಗ ಕ್ಷೇತ್ರಗಳ ಅಭಿವೃದ್ಧಿಯನ್ನೇ ಮುಖ್ಯ ಧ್ಯೇಯ, ಗುರಿಯಾಗಿಟ್ಟುಕೊಂಡು ಮೇಕ್ ಇಂಡಿಯಾ ನಂ.1 (Make In India No.1) ಮಿಷನ್ ಪ್ರಾರಂಭ ಮಾಡಿದ್ದಾರೆ.’ ಈ ಮೇಕ್ ಇಂಡಿಯಾ ನಂ.1 ಮಿಷನ್ಗೆ ಕೈಜೋಡಿಸುವಂತೆ ಅವರು ಬಿಜೆಪಿ ಮತ್ತು ಕಾಂಗ್ರೆಸ್ಗೂ ಕರೆಕೊಟ್ಟಿದ್ದಾರೆ. ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಭಾರತವನ್ನು ನಂಬರ್ 1 ಮಾಡಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಇಂದು ಮೇಕ್ ಇಂಡಿಯಾ ನಂಬರ್ 1 ಉದ್ಘಾಟನೆಗೊಳಿಸಿ, ಜನರನ್ನು ಉದ್ದೇಶಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ‘ಭಾರತಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾದವು. ಈ 75ವರ್ಷದಲ್ಲಿ ನಾವು ತುಂಬ ಸಾಧನೆ ಮಾಡಿದ್ದೇವೆ, ಗಳಿಸಿದ್ದೇವೆ. ಆದರೂ ಭಾರತಕ್ಕಿಂತಲೂ ತಡವಾಗಿ ಸ್ವಾತಂತ್ರ್ಯ ಪಡೆದ ದೇಶಗಳು ಇಂದು ಹಲವು ಕ್ಷೇತ್ರಗಳಲ್ಲಿ, ವಿಚಾರಗಳಲ್ಲಿ ನಮ್ಮನ್ನು ಹಿಂದಿಕ್ಕಿವೆ. ಇದು ಹೇಗೆ ಸಾಧ್ಯವಾಯಿತು? ನಮ್ಮ ಭಾರತ ಹಿಂದೆ ಬಿದ್ದಿದ್ದೆಲ್ಲಿ? ಎಂಬ ಪ್ರಶ್ನೆಯನ್ನು ನಮ್ಮ ದೇಶದ ಅನೇಕರು ಕೋಪದಿಂದ, ಹತಾಶೆಯಿಂದ ಕೇಳುತ್ತಿದ್ದಾರೆ’ ಎಂದು ಹೇಳಿದರು.
‘ನಾವೆಲ್ಲರೂ ಒಟ್ಟಾಗಿ ಈ ಭಾರತವನ್ನು ವಿಶ್ವದ ನಂಬರ್ 1 ರಾಷ್ಟ್ರವನ್ನಾಗಿ ಮಾಡಬೇಕು. ಭಾರತವನ್ನು ಮತ್ತೊಮ್ಮೆ ಉನ್ನತ ಸ್ಥಾನಕ್ಕೆ ಏರಿಸಬೇಕು. ಇದೇ ಕಾರಣಕ್ಕೆ ನಾವೀಗ ಮೇಕ್ ಇಂಡಿಯಾ ನಂಬರ್ 1ನ್ನು ಪ್ರಾರಂಭಿಸುತ್ತಿದ್ದೇವೆ. ಈ ನಮ್ಮ ಅಭಿಯಾನಕ್ಕೆ ದೇಶದ ಪ್ರತಿ ನಾಗರಿಕನೂ ಸೇರಬೇಕು. ಇಲ್ಲಿ ರಾಜಕೀಯ ಪಕ್ಷಭೇದವೂ ಇಲ್ಲ. ಬಿಜೆಪಿ-ಕಾಂಗ್ರೆಸ್ನವರೂ ನಮ್ಮೊಂದಿಗೆ ಬರಬೇಕು. ನಾವೆಲ್ಲ ಇಷ್ಟುವರ್ಷ ನಮ್ಮೊಳಗಿನ ಕಿತ್ತಾಟದಲ್ಲೇ ಕಳೆದು ಹೋದೆವು. ಆದರೆ ಇನ್ನು ಹಾಗಾಗುವುದು ಬೇಡ’ ಎಂದು ಅರವಿಂದ್ ಕೇಜ್ರಿವಾಲ್ ಇಂದು ಹೇಳಿದರು.
‘ಇನ್ನಷ್ಟು ಶಾಲೆ, ಆಸ್ಪತ್ರೆಗಳನ್ನು ಪ್ರಾರಂಭಿಸುವುದು. ಯುವಕರಿಗೆ ಉದ್ಯೋಗ ನೀಡುವುದು, ಮಹಿಳಾ ಸಮಾನತೆ, ಕೃಷಿ ಅಭಿವೃದ್ಧಿಯನ್ನು ಮೇಕ್ ಇಂಡಿಯಾ ನಂಬರ್ 1 ಮಿಷನ್ ಒಳಗೊಂಡಿದೆ. ಎಲ್ಲ ರಾಜಕೀಯ ಪಕ್ಷಗಳೂ ಸೇರಿ ನಡೆಸುವ ಆಂದೋಲನ ಇದಾಗಲಿ ಎಂದು ಹೇಳಿದ ಕೇಜ್ರಿವಾಲ್, ರಾಜಕೀಯದಲ್ಲಿ ಸ್ವಜನಪಕ್ಷಪಾತ ಇರಲೇಬಾರದು ಎಂದರು. ಸ್ವಜನಪಕ್ಷಪಾತಿ ರಾಜಕೀಯ ಪಕ್ಷಗಳ ವಿರುದ್ಧ, ಹೆಸರು ಹೇಳದೆ ಟೀಕಿಸಿದರು.
ಪ್ರಧಾನಿ ಅಭ್ಯರ್ಥಿಯೇ ಕೇಜ್ರಿವಾಲ್?
2024ರ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂಬುದು ಒಂದು ಹಂತಕ್ಕೆ ಈಗ ಸ್ಪಷ್ಟವಾಗಿದೆ. ಆದರೆ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಸ್ಥಾನಕ್ಕೆ ಯಾರೆಲ್ಲ ಆಕಾಂಕ್ಷಿಗಳು ಎಂಬ ಕುತೂಹಲಕ್ಕೆ ಸ್ಪಷ್ಟ ಉತ್ತರ ಇಲ್ಲದೆ ಹೋದರೂ, ಒಂದಷ್ಟು ಪ್ರಮುಖರು ತಮ್ಮ ನಡೆ, ಮಾತು, ಸಕ್ರಿಯತೆಯಿಂದ ಗಮನಸೆಳೆಯುತ್ತಿದ್ದಾರೆ. ಅದರಲ್ಲಿ ಅರವಿಂದ್ ಕೇಜ್ರಿವಾಲ್ ಕೂಡ ಒಬ್ಬರು. ಅವರ ಪಕ್ಷದ ಒಬ್ಬ ತಳಮಟ್ಟದ ಕಾರ್ಯಕರ್ತನಿಂದ ಹಿಡಿದು, ಬಹುತೇಕ ಎಲ್ಲ ಸಂಸದ -ಶಾಸಕರು, ಇದೀಗ ಪಂಜಾಬ್ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ ವರೆಗೆ ಪ್ರತಿಯೊಬ್ಬರೂ ಅರವಿಂದ್ ಕೇಜ್ರಿವಾಲ್ ಮುಂದಿನ ಲೋಕಸಭೆ ಚುನಾವಣೆಯ ಪ್ರಧಾನಿ ಅಭ್ಯರ್ಥಿ ಎಂದೇ ಹೇಳಿಕೊಂಡು ಬರುತ್ತಿದ್ದಾರೆ. ಅದೇ ಹೊತ್ತಲ್ಲಿ ಇಂದು ನಡೆದ ಮೇಕ್ ಇಂಡಿಯಾ ನಂಬರ್ 1 ಉದ್ಘಾಟನೆಯಾಗಿದ್ದು ಇನ್ನಷ್ಟು ಮಹತ್ವ ಎನ್ನಿಸಿದೆ.
ಇಂದು ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರವಿಂದ್ ಕೇಜ್ರಿವಾಲ್ ಬರೀ ದೆಹಲಿ ಬಗ್ಗೆ ಮಾತನಾಡದೆ, ರಾಷ್ಟ್ರ ಎಂದಿದ್ದಾರೆ. ಮಾತುಮಾತಿಗೂ ಈ ದೇಶದ ಒಳಿತು, ದೇಶದ ಅಭಿವೃದ್ಧಿ ಎಂದೇ ಹೇಳಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳ ಒಗ್ಗಟ್ಟಿಗೂ ಕರೆ ನೀಡಿದ್ದಾರೆ. 2024 ಲೋಕಸಭೆ ಚುನಾವಣೆಯೇ ಇವತ್ತಿನ ಕಾರ್ಯಕ್ರಮದ ಟಾರ್ಗೆಟ್ ಎಂಬ ಚರ್ಚೆ ಅದಾಗಲೇ ರಾಜಕೀಯ ವಲಯದಲ್ಲಿ ಶುರುವಾಗಿದೆ. ಕೇಜ್ರಿವಾಲ್ ಈಗಲೇ ಲೋಕಸಭೆ ಚುನಾವಣೆ ಪ್ರಚಾರಕ್ಕೆ ನಾಂದಿ ಹಾಡಿದರು ಎನ್ನಲಾಗುತ್ತಿದೆ.
ಈ ಸಲ ಪಂಜಾಬ್ನಲ್ಲಿ ಸರ್ಕಾರ ರಚನೆ ಮಾಡಿದ್ದೇ ತಡ ಆಮ್ ಆದ್ಮಿ ಪಕ್ಷದ ಉತ್ಸಾಹ ಇಮ್ಮಡಿಯಾಗಿದೆ. ಮುಂಬರುವ ಹಿಮಾಚಲ ಪ್ರದೇಶ, ಗುಜರಾತ್, ಮಧ್ಯಪ್ರದೇಶ ಚುನಾವಣೆ ಮೇಲೆ ಕೂಡ ಪಕ್ಷ ಕಣ್ಣಿಟ್ಟಿದೆ. ಗುಜರಾತ್ನಲ್ಲಿ ಚುನಾವಣೆ ಇನ್ನೂ ಐದು ತಿಂಗಳು ಬಾಕಿ ಇರುವಾಗಲೇ 10 ಜನ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಒಟ್ಟಾರೆ ಆಪ್ ವೇಗ ಹೆಚ್ಚಿಸಿಕೊಂಡು, ಓಡುತ್ತಿರುವ ರಾಜಕೀಯ ಪಕ್ಷವಾಗಿದೆ.
ಇದನ್ನೂ ಓದಿ: ಯಾರೊಂದಿಗೂ ಮೈತ್ರಿಯಿಲ್ಲ, ಯಾರನ್ನಾದರೂ ಸೋಲಿಸಬೇಕೆಂಬ ಆಸೆಯೂ ಇಲ್ಲ: ಅರವಿಂದ್ ಕೇಜ್ರಿವಾಲ್