ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಅದ್ಭುತ ಗೆಲುವು ದೊರೆತ ಬೆನ್ನಲ್ಲೇ 2024ರ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳನ್ನು (Opposition unity) ಒಗ್ಗೂಡಿಸುವ ಪ್ರಯತ್ನಕ್ಕೆ ಹೆಚ್ಚಿನ ಮೌಲ್ಯ ಬಂದಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಅವರು ಭಾನುವಾರ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ದಿಲ್ಲಿಯ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ನಿತೀಶ್ ಅವರ ಜತೆಗೆ ಬಿಹಾರದ ಡಿಸಿಎಂ ತೇಜಸ್ವಿ ಯಾದವ್ ಅವರೂ ಹಾಜರಿದ್ದರು. ಕಳೆದ ಒಂದು ತಿಂಗಳಲ್ಲಿ ನಾಯಕರು ಪರಸ್ಪರ ಎರಡನೇ ಬಾರಿಗೆ ಮಾತುಕತೆ ನಡೆಸುತ್ತಿದ್ದಾರೆ. ಈ ನಡುವೆ, ಟಿಎಂಸಿ ನಾಯಕಿಯೂ ಆಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರೂ ಕಾಂಗ್ರೆಸ್ ಬೆಂಬಲಿಸಲು ಸಿದ್ಧ ಎಂದು ಹೇಳಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು, ಇಡೀ ರಾಷ್ಟ್ರದ ಹಿತದೃಷ್ಟಿಯಿಂದ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಗಳು ನಡೆಯುತ್ತಿವೆ. ಅವರು (ಕಾಂಗ್ರೆಸ್) ಕರ್ನಾಟಕದಲ್ಲಿ ಭಾರಿ ಗೆಲುವು ಸಾಧಿಸಿದ್ದಾರೆ. ರಾಷ್ಟ್ರದ ಹಿತದೃಷ್ಟಿಯಿಂದ ಪ್ರತಿಪಕ್ಷಗಳು ಒಗ್ಗೂಡಬೇಕು. ಅದಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಸಂಯುಕ್ತ ಜನತಾದಳದ ನಾಯಕರೂ ಆಗಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು 2024ರ ಲೋಕಸಭೆ ಚುನಾವಣೆಗೆ ಬಿಜೆಪಿಯ ವಿರುದ್ಧ ಪ್ರತಿಪಕ್ಷಗಳ ಒಕ್ಕೂಟ ರಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ನಾಯಕರನ್ನು ಭೇಟಿ ಮಾಡಿ, ಮಾತುಕತೆ ನಡೆಸುತ್ತಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ, ಪ್ರತಿಪಕ್ಷಗಳ ನಾಯಕರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರತಿಪಕ್ಷಗಳ ನಾಯಕರ ಸಭೆಯು ಶಕ್ತಿಯ ಪ್ರಮುಖ ಪ್ರದರ್ಶನವಾಗಿದೆ. ಆ ಮೂಲಕ ಬಲಾಢ್ಯ ಬಿಜೆಪಿಯನ್ನು ಎದುರಿಸುವ ಬಗ್ಗೆ ಚಿಂತನೆ ನಡೆದಿದೆ.
ಕಾಂಗ್ರೆಸ್ ಬೆಂಬಲಿಸಲು ಸಿದ್ಧ ಎಂದ ಮಮತಾ ಬ್ಯಾನರ್ಜಿ
ಇಷ್ಟು ದಿನ ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎನ್ನುತ್ತಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಈಗ ತಮ್ಮ ವರಸೆಯನ್ನು ಬದಲಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ಸಿದ್ಧ. ಆದರೆ, ಆ ಪಕ್ಷವು ಒಂದಿಷ್ಟು ಷರತ್ತುಗಳನ್ನು ಪಾಲಿಸಬೇಕು ಎಂದಿದ್ದಾರೆ. ಕಾಂಗ್ರೆಸ್ ಪಕ್ಷವು ಕೊಡು-ತೆಗೆದುಕೊಳ್ಳುವಿಕೆ ನೀತಿಯನ್ನು ಅನುಸರಿಸಿದರೆ ರಾಷ್ಟ್ರಮಟ್ಟದಲ್ಲಿ ಆ ಪಕ್ಷಕ್ಕೆ ಬೆಂಬಲಿಸಲು ಸಿದ್ಧ ಎಂದು ಹೇಳಿದ್ದಾರೆ.
ಯಾವ ರಾಜ್ಯಗಳಲ್ಲಿ ಕಾಂಗ್ರೆಸ್ ಬಲಿಶಾಯಾಗಿದೆಯೋ ಅಲ್ಲಿ ಪ್ರಾದೇಶಿಕ ಪಕ್ಷಗಳು ಬೆಂಬಲಿಸಲಿ ಮತ್ತು ಎಲ್ಲಿ ಪ್ರಾದೇಶಿಕ ಪಕ್ಷಗಳು ಬಲಶಾಲಿಯಾಗಿವೆಯೋ ಅಲ್ಲಿ ಕಾಂಗ್ರೆಸ್ ಬೆಂಬಲಿಸುವ ನೀತಿಯನ್ನು ಅನುಸರಿಸಬೇಕು ಎಂಬುದು ಮಮತಾ ಬ್ಯಾನರ್ಜಿ ಅವರು ನೀತಿಯಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು 200 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿಸಲು ಸಿದ್ದ ಎನ್ನುವ ರೀತಿಯಲ್ಲಿ ಹೇಳಿದ್ದಾರೆ.
ಅವರು ಹೋರಾಡಲಿ, ನಾವು ಅವರಿಗೆ ಬೆಂಬಲ ನೀಡುತ್ತಿವೆ ಎಂದಿರುವ ಮಮತಾ ಬ್ಯಾನರ್ಜಿ ಅವರು, ಎಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಭಾವ ಹೊಂದಿವೆಯೋ ಅಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು ಎಂದಿದ್ದಾರೆ. ನಾನು ನಿಮಗೆ ಕರ್ನಾಟಕದಲ್ಲಿ ಬೆಂಬಲ ನೀಡುತ್ತಿದ್ದೇನೆ. ಆದರೆ, ನೀವು ಬಂಗಾಳದಲ್ಲಿ ನನ್ನ ವಿರೋಧವೇ ಹೋರಾಡುತ್ತೀರಿ. ಈ ರೀತಿಯ ನೀತಿ ಸರಿಯಲ್ಲ. ಒಂದು ವೇಳೆ ನೀವು ಏನಾದರೂ ಒಳ್ಳೆಯದನ್ನು ಪಡೆದುಕೊಳ್ಳಬೇಕಿದ್ದರೆ ಒಂದಿಷ್ಟು ಬೇರೆಯದ್ದನ್ನು ತ್ಯಾಗ ಮಾಡಬೇಕಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದರು.
ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಅಲ್ಲ ಎನ್ನುತ್ತಲೇ ಬಹುದೊಡ್ಡ ಭರವಸೆಯೊಂದನ್ನು ನೀಡಿದ ನಿತೀಶ್ ಕುಮಾರ್ !
ನಾವು ಬಂಗಾಳದಲ್ಲಿ ಹೋರಾಡ ಮಾಡಬೇಕು. ದಿಲ್ಲಿಯಲ್ಲಿ ಆಪ್, ಬಿಹಾರದಲ್ಲಿ ನೀತಿಶ್, ತೇಜಸ್ವಿ ಮತ್ತು ಕಾಂಗ್ರೆಸ್ ಶಕ್ತಿಯುತವಾಗಿವೆ. ಹಾಗಾಗಿ, ಅವರು(ಕಾಂಗ್ರೆಸ್) ತಮ್ಮ ನೀತಿಯನ್ನು ನಿರ್ಧರಿಸಬೇಕು. ಅದನ್ನು ನಾನು ನಿರ್ಧರಿಸಲಾಗುವುದಿಲ್ಲ. ಆಯ್ಕೆ ಅವರಿಗೆ ಬಿಟ್ಟದ್ದು. ಆದರೆ, ಎಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿವೆಯೋ ಅಲ್ಲಿ ಕಾಂಗ್ರೆಸ್ ಬೆಂಬಲ ನೀಡಬೇಕು. ಅಂದರೆ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಜಾರ್ಖಂಡ್, ಆಂಧ್ರ ಪ್ರದೇಶ, ತೆಲಂಗಾಣ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಪರವಾಗಿ ಕಾಂಗ್ರೆಸ್ ನಿಲ್ಲಬೇಕು. ಆದರೆ, ಭವಿಷ್ಯದಲ್ಲಿ ಏನೆಲ್ಲ ಬೆಳವಣಿಗೆಗಳು ಸಂಭವಿಸಲಿವೆ ಎಂದು ಈಗಲೇ ಹೇಳಲು ನನ್ನಿಂದ ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.