ನವ ದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ ಡಿಸೆಂಬರ್ನಲ್ಲಿ ನಡೆಯಲಿದ್ದು, ಆಮ್ ಆದ್ಮಿ ಪಕ್ಷ ಈಗಾಗಲೇ ಅಲ್ಲಿ ಚುನಾವಣಾ ಸಿದ್ಧತೆ ನಡೆಸಿದೆ. 10 ವಿಧಾನಸಭಾ ಕ್ಷೇತ್ರಗಳಿಗೆ ಆಪ್ನಿಂದ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಹಾಗೇ, ಆಪ್ನ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಈಗ ಚುನಾವಣಾ ಭರವಸೆಗಳನ್ನೂ ಕೊಟ್ಟಿದ್ದಾರೆ. ‘ಬರುವ ವಿಧಾನಸಭೆ ಚುನಾವಣೆಯಲ್ಲಿ ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ, ಇಲ್ಲಿನ ಮನೆಗಳಿಗೆ ದಿನದ 24 ಗಂಟೆಯೂ ವಿದ್ಯುತ್ ನೀಡುತ್ತೇವೆ ಮತ್ತು ಕಳೆದ ವರ್ಷಗಳ ಬಿಲ್ಗಳನ್ನೆಲ್ಲ ಮನ್ನಾ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಹಾಗೇ ಉದ್ಯೋಗ ಅವಕಾಶ ಸೃಷ್ಟಿಸಿಕೊಡುವುದಾಗಿಯೂ ತಿಳಿಸಿದ್ದಾರೆ.
ಶನಿವಾರದಿಂದ ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರುವ ಅರವಿಂದ್ ಕೇಜ್ರಿವಾಲ್ ಇಂದು (ಆಗಸ್ಟ್ 7) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಆಮ್ ಆದ್ಮಿ ಪಕ್ಷದ ಮೊದಲ ಭರವಸೆ ಏನಿದ್ದರೂ ವಿದ್ಯುತ್ ಪೂರೈಕೆಗೆ ಸಂಬಂಧಪಟ್ಟಿದ್ದಾಗಿರುತ್ತದೆ. ಗುಜರಾತ್ನಲ್ಲಿ ವಿದ್ಯುತ್ ಬಿಲ್ಗಳೆಲ್ಲ ಅತ್ಯಂತ ಹೆಚ್ಚಾಗಿದ್ದು, ಜನರು ಸಂಕಷ್ಟದಲ್ಲಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಹೊರೆಯನ್ನು ಕಡಿಮೆ ಮಾಡುತ್ತೇವೆ. ದೆಹಲಿಯಲ್ಲಿ ನಾವೀಗಾಗಲೇ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ಪಂಜಾಬ್ನಲ್ಲಿ ಇತ್ತೀಚೆಗೆ 25 ಲಕ್ಷ ಮನೆಗಳಿಗೆ ವಿದ್ಯುತ್ ಬಿಲ್ ಇಲ್ಲ’ ಎಂದು ತಿಳಿಸಿದ್ದಾರೆ.
‘ಗುಜರಾತ್ನಲ್ಲಿ ಅನೇಕ ಯುವಕರು ಜೀವನೋಪಾಯಕ್ಕಾಗಿ ಒಂದು ಉದ್ಯೋಗ ಸಿಗದೆ ವ್ಯಥೆ ಪಡುತ್ತಿದ್ದಾರೆ. ಅವರ ನೋವನ್ನು ಖಂಡಿತ ನಾವು ದೂರ ಮಾಡುತ್ತೇವೆ. ದೆಹಲಿಯಲ್ಲಿ ಕಳೆದ ಕೆಲವೇ ವರ್ಷದಲ್ಲಿ ನಾವು 12 ಲಕ್ಷ ಯುವಕರಿಗೆ ಉದ್ಯೋಗ ನೀಡಿದ್ದೇವೆ. ಹಾಗೇ ಗುಜರಾತ್ನಲ್ಲೂ ನಮ್ಮ ಪಕ್ಷ ಸರ್ಕಾರ ರಚನೆ ಮಾಡಿದರೆ ಉದ್ಯೋಗ ನೀಡುತ್ತೇವೆ ಮತ್ತು ನಿರುದ್ಯೋಗಿಗಳಿಗೆ ತಿಂಗಳಿಗೆ 3000 ರೂಪಾಯಿ ಭತ್ಯೆ ಕೊಡುತ್ತೇವೆ’ ಎಂದೂ ಹೇಳಿದರು. ಹಾಗೇ ಶನಿವಾರ ಇಲ್ಲಿನ ಪ್ರಮುಖ ವ್ಯಾಪಾರಿಗಳನ್ನು ಭೇಟಿಯಾಗಿದ್ದ ಅವರು , ‘ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷ ಆಡಳಿತಕ್ಕೆ ಬಂದರೆ, ಸರ್ಕಾರಕ್ಕೆ ಸಲಹೆ ನೀಡಲು ಒಂದು ಸಲಹಾ ಸಮಿತಿಯನ್ನು ರಚಿಸುತ್ತೇವೆ. ರೇಡ್ ರಾಜ್ ಮುಕ್ತ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು.
1998ರಿಂದಲೂ ಗುಜರಾತ್ನಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಈ ಬಾರಿ ಹೇಗಾದರೂ ರಾಜ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬ ಪ್ರಯತ್ನದಲ್ಲಿ ಅರವಿಂದ್ ಕೇಜ್ರಿವಾಲ್ ತೊಡಗಿದ್ದಾರೆ. ಕಳೆದ ತಿಂಗಳೂ ಗುಜರಾತ್ಗೆ ಭೇಟಿ ಕೊಟ್ಟಿದ್ದ ಅವರು, ತಾವು ಅಧಿಕಾರಕ್ಕೆ ಬಂದರೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ಕೊಟ್ಟಿದ್ದರು. ದೆಹಲಿ ಮಾದರಿಯಲ್ಲೇ ಆಡಳಿತ ಕೊಡುವುದಾಗಿಯೂ ಹೇಳಿದ್ದರು.
ಇದನ್ನೂ ಓದಿ: ಕೇಜ್ರಿವಾಲ್ ಚುನಾವಣೋತ್ಸಾಹ; ಗುಜರಾತ್ ಎಲೆಕ್ಷನ್ಗೆ 5 ತಿಂಗಳಿರುವಾಗಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ !